×
Ad

ಇದ್ರೀಸ್ ಪಾಷಾ ಸಾವು ಪ್ರಕರಣ: ಪುನೀತ್‌ ಕೆರೆಹಳ್ಳಿ ಸೇರಿ ಐವರಿಗೆ ಹೈಕೋರ್ಟ್ ನಿಂದ ಜಾಮೀನು

Update: 2023-05-16 21:21 IST

ಬೆಂಗಳೂರು, ಮೇ 16: ಜಾನುವಾರು ಸಾಗಣೆ ವೇಳೆ ಇದ್ರೀಸ್ ಪಾಷಾ ಎಂಬುವರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದ ಪ್ರಕರಣದಲ್ಲಿ ಆರೋಪಿಗಳಾಗಿರುವ ರಾಷ್ಟç ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಹಾಗೂ ಇತರೆ ನಾಲ್ವರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 

ಆರೋಪಿಗಳು ಪ್ರತ್ಯೇಕವಾಗಿ ಸಲ್ಲಿಸಿದ್ದ ಮೂರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರ ನೇತೃತ್ವದ ರಜಾಕಾಲದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಆರೋಪಿಗಳಾದ ಪುನೀತ್ ಕೆರೆಹಳ್ಳಿ, ಗೋಪಿ, ಸುರೇಶ್, ಪವನ್ ಕುಮಾರ್ ಎ.ಎನ್.ಪಿ ಲಿಂಗಪ್ಪ ಎಂಬುವವರಿಗೆ ಜಾಮೀನು ಮಂಜೂರು ಮಾಡಿ ನ್ಯಾಯಾಲಯ ಆದೇಶಿಸಿದೆ. 

ಅರ್ಜಿದಾರರ ಪರ ವಾದಿಸಿದ ವಕೀಲರು, ಇದ್ರೀಸ್ ಪಾಷಾ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ತನಿಖೆ ಪೂರ್ಣಗೊಂಡಿದೆ. ಅಲ್ಲದೆ, ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ಪೂರ್ಣಗೊಳಿಸಲಾಗಿದೆ. ತನಿಖೆಯಲ್ಲಿ ಏನೇನು ವಶಪಡಿಸಿಕೊಳ್ಳಬೇಕು ಎಲ್ಲವೂ ಪೂರ್ಣಗೊಂಡಿದೆ. ಇನ್ನು ಆರೋಪ ಪಟ್ಟಿ ಸಲ್ಲಿಕೆಯಾಗಿ ವಿಚಾರಣೆ ನಡೆಯಬೇಕಿದೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ ಜಾಮೀನು ಮಂಜೂರು ಮಾಡಿತು.

ಪ್ರಕರಣವೇನು?: ಮಾ.31ರಂದು ಮಂಡ್ಯದಿಂದ ಬೆಂಗಳೂರಿನತ್ತ ಆಗಮಿಸುತ್ತಿದ್ದ ಜಾನುವಾರು ಸಾಗಣೆ ವಾಹನವೊಂದನ್ನು ಸಾತನೂರು ಪೊಲೀಸ್ ಠಾಣೆ ಸಮೀಪ ಪುನೀತ್ ಕೆರೆಹಳ್ಳಿ ಹಾಗೂ ಆತನ ಸಹಚರರು ಅಡ್ಡಗಟ್ಟಿದ್ದರು. ಬಳಿಕ ವಾಹನದಲ್ಲಿ ಇದ್ದವರ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. 

ಎಪ್ರಿಲ್ 1ರಂದು ಬೆಳಗ್ಗೆ ಘಟನಾ ಸ್ಥಳದಿಂದ ಅಂದರೆ ಪೊಲೀಸ್ ಠಾಣೆಯಿಂದ 100 ಮೀಟರ್ ದೂರದಲ್ಲಿ ಇದ್ರೀಸ್ ಪಾಷಾ ಅವರ ಮೃತದೇಹ ಪತ್ತೆಯಾಗಿತ್ತು. ಪುನೀತ್ ಮತ್ತು ಸಹಚರರಿಂದ ಹಲ್ಲೆ ನಡೆದಿದೆ ಎಂದು ಪಾಷಾ ಅವರ ಸಹೋದರ ಯೂನುಸ್ ಪಾಷಾ ದೂರು ನೀಡಿದ್ದರು. ಇದನ್ನು ಆಧರಿಸಿ ಆರೋಪಿಗಳ ವಿರುದ್ಧ ಸಾತನೂರು ಠಾಣೆಯಲ್ಲಿ ಐಪಿಸಿ ಸೆಕ್ಷನ್ 302, 324, 341, 504, 506 ಜೊತೆಗೆ 34ರ ಅಡಿ ಪ್ರಕರಣ ದಾಖಲಾಗಿತ್ತು. ಎಪ್ರಿಲ್ 5ರಂದು ಆರೋಪಿಗಳನ್ನು ರಾಜಸ್ಥಾನದಲ್ಲಿ ರಾಮನಗರ ಪೊಲೀಸರು ಬಂಧಿಸಿದ್ದರು.

Similar News