×
Ad

ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ವೈಎಸ್​ವಿ ದತ್ತ; ಅಭಿಮಾನಿಗಳಿಗೆ ಭಾವುಕ ಪತ್ರ

''ಕಡೂರಿನ ಪ್ರತಿ ಹಳ್ಳಿಗಳಿಗೆ ತೆರಳಿ ಕ್ಷಮೆ ಕೋರುತ್ತೇನೆ....''

Update: 2023-05-16 22:46 IST

ಕಡೂರು, ಮೇ 16: ವಿಧಾನಸಭೆ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಸ್ಪರ್ಧಿಸಿ ಪರಾಜಿತಗೊಂಡ ಜೆಡಿಎಸ್​ನ ವೈಎಸ್​ವಿ ದತ್ತ ಅವರು ಇದೀಗ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. 

ಈ ಸಂಬಂಧ   ಸುದೀರ್ಘ ಪತ್ರ ಬರೆದಿರುವ ಅವರು, 'ಕಡೂರಿನಲ್ಲಿದ್ದುಕೊಂಡೇ ಪಕ್ಷ ಸಂಘಟನೆ ಸೇರಿದಂತೆ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ' ಎಂದು ತಿಳಿಸಿದ್ದಾರೆ. 

ವೈಎಸ್​ವಿ ದತ್ತ ಬರೆದ ಪತ್ರದಲ್ಲೇನಿದೆ? 

'ಕಡೂರು ವಿಧಾನಸಭಾ ಕ್ಷೇತ್ರದ ಮತದಾರ ಬಂಧುಗಳಿಗೆ ನಿಮ್ಮ ದತ್ತಣ್ಣ ಮಾಡುವ ನಮಸ್ಕಾರಗಳು...'

''ನಾನೀಗ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ನಾನು ಎಲ್ಲಿ ಎಡವಿದೆ, ನನ್ನ ಮತದಾರ ಬಂಧುಗಳಾದ ನಿಮ್ಮ ನಿರೀಕ್ಷೆಯನ್ನು ಮುಟ್ಟಲು ನಾನು ಎಲ್ಲಿ ವಿಫಲನಾಗಿದ್ದೇನೆ ಎಂಬ ಬಗ್ಗೆ ಚಿಂತನ ಮಂಥನ ಮಾಡಿಕೊಳ್ಳಬೇಕಿದೆ''

2023ರ ಚುನಾವಣೆ ನನ್ನ ಪಾಲಿಗೆ ಅವಿಸ್ಮರಣೀಯ ಚುನಾವಣೆ ಅಗಬಹುದೆಂಬ ಅಶಾಭಾವನೆ ಮೂಡಿತ್ತು. ಅದೂ ಅಲ್ಲದೇ ಇದೇ ನನ್ನ ಕಡೆಯ ಚುನಾವಣೆ ಎಂಬುದನ್ನೂ ತಮ್ಮಲ್ಲಿ ತಿಳಿಸಿದ್ದೆ. ಆದರೆ, ಚುನಾವಣೆ ಮುಗಿದು ಫಲಿತಾಂಶ ಹೊರಬಂದ ಮೇಲೆ ನನಗೆ ವಾಸ್ತವ ದರ್ಶನವಾಯಿತು ಎಂದು ತಮ್ಮ ಸೋಲಿನ ಬಗ್ಗೆ ಹೇಳಿಕೊಂಡಿದ್ದಾರೆ.

2006ರಲ್ಲಿ ಕಡೂರು ಕ್ಷೇತ್ರಕ್ಕೆ ನಾನು ಅನಿವಾರ್ಯವಾಗಿ ಕಾಲಿಟ್ಟ ದಿನದಿಂದ 2023ರವರೆಗಿನ ನನ್ನ ನಡೆವಳಿಕೆ, ನಿರ್ಧಾರಗಳು ಹಾಗೂ ಮತದಾರರೊಂದಿಗಿನ ನನ್ನ ಸಂಬಂಧದ ಬಗ್ಗೆ ನಾನೇ ಎಲ್ಲೋ ಎಡವಿದ್ದೇನೆ ಎಂಬ ಅನುಮಾನ ನನ್ನನ್ನು ಸದಾ ಕಾಡತೊಡಗಿದೆ. ಚುನಾವಣಾ ಫಲಿತಾಂಶದ ಬಗ್ಗೆ ನಾನೆಂದೂ ತಲೆಕಡೆಸಿಕೊಂಡವನಲ್ಲ. ನನ್ನ ರಾಜಕೀಯ ಜೀವನದಲ್ಲಿ ಗೆಲುವಿಗಿಂತ ಸೋಲನ್ನೇ ಜಾಸ್ತಿ ನೋಡಿದವನು. ಸೋಲು ಗೆಲುವು ಎರಡನ್ನೂ ಸಮಚಿತ್ತದಿಂದ ಸಮಭಾವದಿಂದ ನೋಡುವ ಮನಸ್ಥಿತಿ ನನ್ನದು. ಹಾಗಾಗಿ ಬಂದ ಫಲಿತಾಂಶದ ಬಗ್ಗೆ ನನಗೆ ಎಳ್ಳಷ್ಟೂ ಬೇಸರವಿಲ್ಲ ಎಂದಿದ್ದಾರೆ.

ಕಳೆದ 17 ವರ್ಷಗಳಿಂದ ನೀವು ತೋರಿರುವ ಪ್ರೀತಿ, ಬೆಂಬಲ, ಅಭಿಮಾನದ ಕಾರಣದಿಂದ ನಿಮ್ಮ ಋಣ ತೀರಿಸುವ ಹಾಗೂ ನನ್ನ ಕೊನೆಯ ಉಸಿರು ಇರುವವರೆಗೂ ನಾನು ನಿಮ್ಮೊಂದಿಗೆ ಇದ್ದು ನಿಮ್ಮಲ್ಲಿಯೇ ಒಬ್ಬನಾಗಿ ಈ ನನ್ನ ನೆಲದಲ್ಲಿ ಮಣ್ಣಾಗಬೇಕೆಂಬ ದೃಢ ಸಂಕಲ್ಪ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಕಡೂರಿನಲ್ಲಿಯೂ ಇದೇ ಪರಿಸ್ಥಿತಿಯಾಗಿದ್ದು ವಾಸ್ತವ. ನೂತನ ಶಾಸಕರಿಗೆ ಅಭಿನಂದನೆ ತಿಳಿಸಿರುವೆ. ತಾಲೂಕಿನ ಅಭಿವೃದ್ಧಿಯಲ್ಲಿ ಅವರ ರಚನಾತ್ಮಕ ಕಾರ್ಯಗಳಿಗೆ ನಮ್ಮ ಸಹಮತವಿರುತ್ತದೆ ಎಂದ ಅವರು, ಈ ಬಾರಿ ಚುನಾವಣೆಯಲ್ಲಿ ಸೋತಿರಬಹುದು. ಆದರೆ ಅದರಿಂದ ಕಾರ್ಯಕರ್ತರು ಹತಾಶರಾಗಬಾರದು. ಸೊನ್ನೆಯಿಂದ ಇಲ್ಲಿ ಪಕ್ಷ ಕಟ್ಟಿದ್ದೇವೆ. ಅದಕ್ಕೆ ಪುನಶ್ಚೇತನ ಮಾಡುವ ಕಾರ್ಯವಾಗಬೇಕಿದೆ. ಸಧ್ಯದಲ್ಲೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ, ಲೋಕಸಭೆ ಚುನಾವಣೆಗಳು ಎದುರಿಗಿವೆ.ಅದರಲ್ಲಿ ನಮ್ಮ ಪಕ್ಷ ದೊಡ್ಡ ಸಾಧನೆ ಮಾಡುವ ನಿಟ್ಟಿನಲ್ಲಿ ಪ್ರತೀ ಕಾರ್ಯಕರ್ತರು ಕೆಲಸ ಮಾಡಬೇಕು. 

'ದೇವೇಗೌಡರು, ಸಂಸದ ಪ್ರಜ್ವಲ್ ನಮ್ಮ ಜೊತೆಯಿದ್ದಾರೆ. ಯಾವುದೇ ಹತಾಶೆಗೆ ಕಾರಣವಿಲ್ಲ. ಯಾರೂ ಯಾರನ್ನೂ ದೂಷಿಸುವ ಅಗತ್ಯವಿಲ್ಲ. ಈ ಚುನಾವಣೆಯನ್ನು ಸಮರ್ಥವಾಗಿಯೇ ಎದುರಿಸಿದ್ದೇವೆ. ಅದಕ್ಕೆ ಸಹಕಾರ ಕೊಟ್ಟ ದೇವೇಗೌಡರ ಕುಟುಂಬ ಮತ್ತು ಪಕ್ಷದ ಪ್ರತೀ ಕಾರ್ಯಕರ್ತನಿಗೂ ಕೃತಜ್ಞತೆ ಸಲ್ಲಿಸುತ್ತೇನೆ'

" ನನಗೆ ಕ್ಷೇತ್ರದ ಜನತೆ ನೀಡಿರುವ ಪ್ರೀತಿಗೆ ಪ್ರತಿಯಾಗಿ ನನ್ನ ಕೊನೆಯುಸಿರು ಇರುವವರೆಗೂ ಎಲ್ಲರಲ್ಲೂ ಒಂದಾಗಿ ನನ್ನ ನೆಲದಲ್ಲಿಯೇ ಮಣ್ಣಾಗುತ್ತೇನೆ. ನನ್ನ ಹಲವಾರು ತಪ್ಪುಗಳಿಗೆ ಜನರು ಸರಿಯಾದ ಶಿಕ್ಷೆ ನೀಡಿದ್ದಾರೆ . ತಪ್ಪು ಮಾಡಿದ ನಾನು ಅದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇನೆ. ಜೂ.24 ನನ್ನ ಜನ್ಮದಿನ. ಅಂದಿನಿಂದ ಕ್ಷೇತ್ರದ ಪ್ರತಿ ಹಳ್ಳಿಗೆ ಪಾದಯಾತ್ರೆಯ ಮೂಲಕ ತೆರಳಿ ನನ್ನ ತಪ್ಪುಗಳಿಗಾಗಿ ಕ್ಷಮೆ ಕೋರುತ್ತೇನೆ. ಪಾದಯಾತ್ರೆಯಲ್ಲಿ ಹಳ್ಳಿಗಳಲ್ಲೆ ಗ್ರಾಮ ವಾಸ್ತವ್ಯವನ್ನೂ ಮಾಡುವೆ. ಈ ಸಂಕಲ್ಪ ಯಾವುದೇ ಚುನಾವಣಾ ದೃಷ್ಟಿಯಿಂದ ಮಾಡಿಲ್ಲ'' ಎಂದು ದತ್ತ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. 

Full View

Similar News