ನಾನು ನಂಬಿದವರೇ ಕತ್ತು ಕೊಯ್ದರು: ಲಿಂಗಾಯತ ಮುಖಂಡರ ವಿರುದ್ಧವೇ ಅಸಮಾಧಾನ ಹೊರ ಹಾಕಿದ ಮಾಜಿ ಸಚಿವ ಸೋಮಣ್ಣ
ಚಾಮರಾಜನಗರ: ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿರುವ ಚಾಮರಾಜನಗರ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ, ಮಾಜಿ ಸಚಿವ ಸೋಮಣ್ಣ ಲಿಂಗಾಯತ ಮುಖಂಡರ ವಿರುದ್ಧವೇ ಅಸಮಾಧಾನ ಹಾಕಿರುವ ಘಟನೆ ನಡೆದಿದೆ.
ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರಿಗೆ ಕೃತಜ್ಞತೆ ಸಭೆಯಲ್ಲಿ ಭಾವುಕರಾಗಿ ಮಾತನಾಡಿದ ಅವರು, 'ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಮಾಡಿದ್ದು ನಾನು, ಮಹದೇಶ್ವರ ಬೆಟ್ಟ ಪ್ರಾಧಿಕಾರ ಮಾಡಿದ್ದು ನಾನು, ಕೆರೆಗಳಿಗೆ ನೀರು ತುಂಬಿಸಿದ್ದು ನಾನು, ನನಗೆ ಈ ರೀತಿ ಅನ್ಯಾಯವಾಗಿದೆ. ನಾನು ನಂಬಿದವರೇ ಕತ್ತು ಕೊಯ್ದರು' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ನಿಮಗೆ ಸ್ವಾಭಿಮಾನ, ಗೌರವ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ. ಇಲ್ಲಿರುವ ಒಬ್ಬೊಬ್ಬನೂ 10 ಮತಗಳನ್ನು ಹಾಕಿಸಿದ್ದರೆ ಸಾಕಿತ್ತು. ನನಗೆ ಎಂತಹ ಬಳವಳಿ ಕೊಟ್ಟಿರಿ ನೀವು? ಈ ಕೃಪಾಪೋಷಿತ ನಾಟಕದಲ್ಲಿ ಮೋಸ ಮಾಡಿದವರು ನನ್ನ ಸಮುದಾಯದವರು. ಎಲ್ಲಿವರೆಗೆ ಮನೆಹಾಳು ಬಿದ್ದಿರುತ್ತದೋ ಅಲ್ಲಿಯವರೆಗೆ ಉದ್ಧಾರ ಆಗುವುದಿಲ್ಲ' ಎಂದು ಅಸಮಾಧಾನ ಹೊರ ಹಾಕಿದರು.
'7-8 ಮಂದಿಯಿಂದ ಈ ಸೋಲುಂಟಾಯಿತು, ನನ್ನ ಸಮಾಜದವರೇ ನನಗೇ ಕೈ ಕೊಟ್ಟರು. ಯಾರ್ಯಾರೋ ಬೋರ್ಡ್ ಅಧ್ಯಕ್ಷರು ಮಠಗಳಿಗೆ ದುಡ್ಡು ಕೊಟ್ಟು ಜನರ ದಿಕ್ಕು ತಪ್ಪಿಸಿದರು ಎಂದು ಬಿಜೆಪಿ ಮುಖಂಡರ ವಿರುದ್ಧ ಸೋಮಣ್ಣ ಆರೋಪ ಮಾಡಿದರು.