ಮುಸ್ಲಿಮರಿಗೆ ಬೆದರಿಕೆ ಹಾಕಿಲ್ಲ: ವ್ಯಾಪಕ ಆಕ್ರೋಶದ ಬಳಿಕ ಸ್ಪಷ್ಟನೆ ನೀಡಿದ ಪ್ರೀತಂ ಗೌಡ
ಹಾಸನ : ಮೇ 17: ಒಂದು ವರ್ಗದ ವಿರುದ್ಧ ದ್ವೇಷದ ಮಾತುಗಳ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ನಂತರ ಮಾಜಿ ಶಾಸಕ, ಪರಾಜಿತ ಬಿಜೆಪಿ ಅಭ್ಯರ್ಥಿ ಪ್ರೀತಂ.ಜೆ. ಗೌಡ ಸ್ಪಷ್ಟನೆ ನೀಡಿದ್ದಾರೆ.
ವಿದ್ಯಾನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, 'ನಾನು ಯಾರನ್ನೂ ಭಯಪಡಿಸುವ ಕೆಲಸಕ್ಕೆ ಕೈ ಹಾಕಿಲ್ಲ, ಮುಸ್ಲಿಮ್ ರನ್ನು ಅತಿ ಹೆಚ್ಚು ಪ್ರೀತಿಸಿ ಮತ್ತು ಗೌರವ ಕೊಡುವ ವ್ಯಕ್ತಿ. ಸಾರ್ವಜನಿಕ ಜೀವನದಲ್ಲಿ ಇದ್ದರೆ ಆಕ್ರೋಶ ಹೊರ ಹಾಕುವ ಅವಶ್ಯಕತೆ ನನಗಿಲ್ಲ ಎಂದು ಮಾಜಿ ಶಾಸಕ ಪ್ರೀತಂ ಜೆ. ಗೌಡ ತಮ್ಮ ಮನದಾಳದ ಮಾತನ್ನು ಹೇಳಿಕೊಂಡರು.
'ನಾನು ಒಂದು ವರ್ಗ ಅಂತ ಹೇಳಿದ್ದೇನೆ, ಒಂದು ಸಮುದಾಯ ಅಂತ ಹೇಳಿಲ್ಲ, ಒಂದು ವರ್ಗದ ಜನ ಕಳೆದ ಬಾರಿ ಕಾಂಗ್ರೆಸ್ ಗೆ ಮತ ಹಾಕುತ್ತಿದ್ದರು, ಈಗ ಜೆಡಿಎಸ್ ಗೆ ಹಾಕಿದ್ದಾರೆ. ಆ ವರ್ಗದ ಮತಗಳು ನನಗೆ ಬೇಕಿಲ್ಲ, ಅದರಲ್ಲೇನು ಮಡಿವಂತಿಕೆ ಇಲ್ಲ' ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಪ್ರದೀಪ್ , ಪ್ರೀತಿವರ್ದನ್ ಇತರರು ಉಪಸ್ಥಿತರಿದ್ದರು.