ಚಿಕ್ಕಮಗಳೂರು ಜಿಲ್ಲೆಯ ಸೌಹಾರ್ದ-ಸಾಮರಸ್ಯಕ್ಕೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ: ನೂತನ ಶಾಸಕ ಎಚ್.ಡಿ.ತಮ್ಮಯ್ಯ
''ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶೀಘ್ರ ಸಲಹಾ ಸಮಿತಿ ರಚನೆ''
ಚಿಕ್ಕಮಗಳೂರು, ಮೇ 17: ಸರಕಾರ ರಚನೆ ಬಳಿಕ ಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸಲಹಾ ಸಮಿತಿ ರಚಿಸಲಾಗುವುದು. ಸಮಿತಿ ಸಭೆಯ ಸಲಹೆ ಪಡೆದು ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳೂ ಸೇರಿದಂತೆ ಪ್ರಮುಖ ಅಭಿವೃದ್ಧಿ ಯೋಜನೆಗಳ ಜಾರಿ ಕ್ರಮವಹಿಸಲಾಗುವುದು. ಸಲಹಾ ಸಮಿತಿಯ ನಿರೀಕ್ಷೆಗಳಿಗೆ ತಕ್ಕಂತೆ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುವುದು ಎಂದು ಕ್ಷೇತ್ರದ ನೂತನ ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದ್ದಾರೆ.
ಬುಧವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ಕ್ಷೇತ್ರದ ಜನತೆ 20 ವರ್ಷಗಳ ದುರಾಡಳಿತಕ್ಕೆ ಬೇಸತ್ತು ಬದಲಾವಣೆ ಬೇಕೆಂದು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದು, ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಲಾಗುವುದು. ಅಭಿವೃದ್ಧಿಗಾಗಿ ಜನ ಬದಲಾವಣೆ ಬಯಸಿರುವುದರಿಂದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ತನ್ನ ಅಧಿಕಾರವಧಿಯಲ್ಲಿ ನಾನು ಎಂಬ ಪದವನ್ನು ಎಂದೂ ಬಳಸುವುದಿಲ್ಲ. ನಾನು ಸದಾ ಜನರೊಂದಿಗೆ ಸಂಪರ್ಕದಲ್ಲಿರಲು ಬಯಸುತ್ತೇನೆ. ಸಾರ್ವಜನಿಕರು ದಿನದ 24 ಗಂಟೆಗಳ ಅವಧಿಯಲ್ಲೂ ನನಗೆ ಕರೆ ಮಾಡಿ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಜನರ ಸಮಸ್ಯೆಗೆ ಸದಾ ಸ್ಪಂದಿಸುತ್ತ ಜನಪರ ಕೆಲಸ ಮಾಡಲು ಬದ್ಧ ಎಂದರು.
ನಾನಾಗಲೀ, ನನ್ನ ಕುಟುಂಬದವರಾಗಲೀ ಗುತ್ತಿಗೆ ಕೆಲಸವನ್ನು ಮಾಡುವುದಿಲ್ಲ. ಗುಣಮಟ್ಟದ ಕಾಮಗಾರಿಗಳನ್ನು ಮಾಡುವ ಗುತ್ತಿಗೆದಾರನಿಗೆ ಮಾತ್ರ ಕ್ಷೇತ್ರದಲ್ಲಿ ಬೆಳೆಯಲು ಅವಕಾಶ ನೀಡಲಾಗುವುದು. ಕಳಪೆ ಕೆಲಸ ಮಾಡುವವರಿಗೆ ಅವಕಾಶ ನೀಡುವುದಿಲ್ಲ. ಗುತ್ತಿಗೆ ವಿಚಾರದಲ್ಲಿ ಚಿಕ್ಕಮಗಳೂರಿನಲ್ಲಿ ಮಾನೋಪಲಿ ವ್ಯವಸ್ಥೆ ನಿರ್ಮಾಣವಾಗಿದ್ದು, ಇದಕ್ಕೆ ಇತಿಶ್ರೀ ಹಾಡಲಾಗುವುದು ಎಂದ ಅವರು, ಚಿಕ್ಕಮಗಳೂರು ಕ್ಷೇತ್ರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗಿದ್ದು, ಅದನ್ನು ಮರುಸ್ಥಾಪಿಸಲಾಗುವುದು ಎಂದರು.
ಚಿಕ್ಕಮಗಳೂರು ಜಿಲ್ಲೆ ಸೌಹಾರ್ದ, ಸಾಮರಸ್ಯಕ್ಕೆ ಹೆಸರಾಗಿದ್ದ ನಾಡು, ಇತ್ತೀಚಿನ ಕೆಲ ವರ್ಷಗಳಿಂದ ಕೆಲವರು ರಾಜಕೀಯ ಲಾಭಕ್ಕಾಗಿ ಇಲ್ಲಿನ ಸೌಹಾರ್ದ ವಾತಾವರಣವನ್ನು ಹಾಳು ಗೆಡವಿದ್ದಾರೆ. ಇನ್ನು ಮುಂದೆ ಜಿಲ್ಲೆಯ ಸೌಹಾರ್ದ ಹಾಳು ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ. ಜಿಲ್ಲೆಯ ಸೌಹಾರ್ದ-ಸಾಮಾರಸ್ಯಕ್ಕೆ ಒತ್ತು ನೀಡಲಾಗುವುದು. ಸೌಹಾರ್ದವನ್ನು ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮವಹಿಸಲಾಗುವುದು ಎಂದ ಅವರು, ಚಿಕ್ಕಮಗಳೂರಿನಲ್ಲಿ ಜನಸ್ನೇಹಿ ಆಡಳಿತ ಇಲ್ಲದಂತಹ ಪರಿಸ್ಥಿತಿ ಇದ್ದು, ಸರಕಾರಿ ಕಚೇರಿಗಳನ್ನು ಜನಸ್ನೇಹಿಯನ್ನಾಗಿಸಲಾಗುವುದು. ವಿವಿಧ ಕೆಲಸದ ನಿಮಿತ್ತ ಸರಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರನ್ನು ಕಚೇರಿಗಳಲ್ಲಿ ಗೌರವದಿಂದ ನಡೆಸಿಕೊಂಡು ಜನರ ಸಮಸ್ಯೆ ಪರಿಹರಿಸುವಂತಹ ವ್ಯವಸ್ಥೆಯನ್ನು ರೂಪಿಸಲಾಗುವುದು. ಈ ಸಂಬಂಧ ಜಿಲ್ಲಾಡಳಿತಕ್ಕೆ ಸೂಚನೆಯನ್ನೂ ನೀಡಲಾಗುವುದು. ಇಂದಿನಿಂದಲೇ ಈ ವ್ಯವಸ್ಥೆ ಜಾರಿಯಾಗಲಿದೆ ಎಂದರು.
ಚಿಕ್ಕಮಗಳೂರು ಜಿಲ್ಲೆ ಪಂಚ ನದಿಗಳ ಬೀಡಾಗಿದ್ದರೂ ಎಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ನೀರಾವರಿ ಯೋಜನೆಗಳ ಅವೈಜ್ಞಾನಿಕ ಜಾರಿಯಿಂದಾಗಿ ಸೌಲಭ್ಯ ರೈತರಿಗೆ ಸಿಗದಂತಾಗಿದೆ. ಈ ಹಿನ್ನೆಲೆಯಲ್ಲಿ ಅಂತರ್ಜಲ ವೃದ್ಧಿಗೆ ಯೋಜನೆ ರೂಪಿಸಲಾಗುವುದು. ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ವೈಜ್ಞಾನಿಕವಾಗಿ ಜಾರಿ ಮಾಡಲು ಕ್ರಮವಹಿಸಲಾಗುವುದು. ಚಿಕ್ಕಮಗಳೂರು ಕ್ಷೇತ್ರ ಸೇರಿದಂತೆ ಜಿಲ್ಲಾದ್ಯಂತ ಗ್ರಾಮೀಣ ಭಾಗದಲ್ಲಿ ಸರ್ವಋತು ರಸ್ತೆಗಳ ನಿರ್ಮಾಣಕ್ಕಾಗಿ ಸರಕಾರಕ್ಕೆ ಎಲ್ಲ ಶಾಸಕರೊಂದಿಗೆ ತೆರಳಿ ಮನವಿ ಮಾಡಲಾಗುವುದು. ರೈತರ ಬೆಳೆಗಳ ಸಂರಕ್ಷಣೆಯ ಉದ್ದೇಶದಿಂದ ರೈತರ ಬೇಡಿಕೆಯಂತೆ ನಗರದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೂ ಅಗತ್ಯ ಕ್ರಮವಹಿಸಲಾಗುವುದು.
ಚಿಕ್ಕಮಗಳೂರು ನಗರಸಭೆಯ ಆಡಳಿತ ಪಕ್ಷದವರಿಗೆ ಅನುಭವದ ಕೊರತೆಯಿಂದಾಗಿ ಕೋಟ್ಯಂತರ ರೂ. ಅನುದಾನ ಯುಜಿಡಿ, ಅಮೃತ್ ಯೋಜನೆಗಳು ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ಯೋಜನೆಗಳ ಲಾಭ ನಗರದ ಜನರಿಗೆ ದಶಕ ಕಳೆದರೂ ಸಿಕ್ಕಿಲ್ಲ. ಮುಂದಿನ 1 ವರ್ಷಕ್ಕೂ ಮುನ್ನ ಯುಜಿಡಿ ಹಾಗೂ ಅಮೃತ್ ಕುಡಿಯುವ ನೀರು ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಕ್ಷೇತ್ರದ ಬಯಲು ಭಾಗದಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನೂ 1 ವರ್ಷದೊಳಗೆ ಪೂರ್ಣಗೊಳಿಸಲಾಗುವುದು. ಕಳೆದ 19 ವರ್ಷಗಳಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದೇ ಒಂದು ಮನೆ ನೀಡಲು ಸಾಧ್ಯವಾಗಿಲ್ಲ. ನಿವೇಶನ ನೀಡಲೂ ಸಾಧ್ಯವಾಗಿಲ್ಲ. ಹಿಂದೆ ನೀಡಿದ್ದ ಮನೆಗಳಿಗೆ ಹಕ್ಕುಪತ್ರವನ್ನೂ ನೀಡಿಲ್ಲ. ತನ್ನ ಅವಧಿಯಲ್ಲಿ ಆಶ್ರಯ ಮನೆಗಳು, ನಿವೇಶನ, ಹಕ್ಕುಪತ್ರಗಳನ್ನು ನೀಡಲು ಅಗತ್ಯ ಕ್ರವವಹಿಸುತ್ತೇನೆ. ಮುಳ್ಳಯ್ಯನಗಿರಿ, ಬಾಬಾ ಬುಡನ್‍ಗಿರಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ವಿಶೇಷ ಯೋಜನೆ ರೂಪಿಸಲಾಗುವುದು ಎಂದರು.
ಕಳಸ ಇನಾಂ ಭೂಮಿ ಸಮಸ್ಯೆ ಹಾಗೂ ಜಿಲ್ಲಾದ್ಯಂತ ಜನರ ನೆಮ್ಮದಿ ಕೆಡಿಸಿರುವ ಡೀಮ್ಡ್ ಅರಣ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಸಿಎಂ ಬಳಿ ನಿಯೋಗ ಕರೆದೊಯ್ದು ಅರಣ್ಯಾಧಿಕಾರಿಗಳು, ಕಂದಾಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದ ಅವರು, ಬಸವನಳ್ಳಿಕೆರೆ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಕೆರೆ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನದಲ್ಲಿ ಗುಣಮಟ್ಟದ ಕಾಮಗಾರಿ ಆಗಬೇಕು. ಅನುದಾನ ದುರ್ಬಳಕೆ ಆದಲ್ಲಿ ಗುತ್ತಿಗೆದಾರರ ವಿರುದ್ಧ ಕ್ರಮವಹಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಎಲ್.ಮೂರ್ತಿ, ರೇಖಾಹುಲಿಯಪ್ಪಗೌಡ, ಪುಟ್ಟೇಗೌಡ, ಎಚ್.ಪಿ.ಮಂಜೇಗೌಡ, ಕೆ.ಮುಹಮ್ಮದ್, ರವೀಶ್, ಶಿವಾನಂದಸ್ವಾಮಿ, ರೂಬೆನ್‍ಮೋಸೆಸ್, ಬಿ.ಎಚ್.ಹರೀಶ್, ತನೋಜ್‍ಕುಮಾರ್, ಮಲ್ಲೇಶಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
'ಈ ಬಾರಿಯ ಚುನಾವಣೆಯಲ್ಲಿ ಮತದಾರರು ಭ್ರಷ್ಟಾಚಾರ, ದುರಾಡಳಿತದ ವಿರುದ್ಧ ಮತಚಲಾಯಿಸಿದ್ದಾರೆ. ತನ್ನನ್ನು ಸಾರ್ವಜನಿಕರು ಪಕ್ಷಾತೀತವಾಗಿ ಬೆಂಬಲಿಸಿದ್ದಾರೆ. ಸಂವಿಧಾನಕ್ಕೆ ಅಪಾಯ ಬಂದಿರುವುದನ್ನು ಅರಿತ ಜಾಗೃತ ಸಂಘಟನೆಗಳು ಸಂವಿಧಾನದ ಪರ ಇರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದ್ದರಿಂದ ನನಗೆ ಗೆಲುವು ಸಿಕ್ಕಿದೆ. ಈ ಗೆಲುವು ನನ್ನ ಗೆಲುವಲ್ಲ, ಚಿಕ್ಕಮಗಳೂರು ಕ್ಷೇತ್ರದ ಜನರ ಗೆಲುವಾಗಿದ್ದು, ಜನರ ನಿರೀಕ್ಷೆಯನ್ನು ಹುಸಿ ಮಾಡುವುದಿಲ್ಲ'
- ಎಚ್.ಡಿ.ತಮ್ಮಯ್ಯ
'ಕಳೆದ 20 ವರ್ಷಗಳಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಲ್ಲಿ ಅಕ್ರಮ, ಕಳಪೆ ಕಾಮಗಾರಿ ನಡೆದಿದೆ. ನಗರಸಭೆ ಕಾಮಗಾರಿಗಳಲ್ಲೂ ಅಕ್ರಮ ನಡೆದಿದೆ. ನಗರಸಭೆ ಅಧ್ಯಕ್ಷನಾಗಿದ್ದ ನನ್ನ ಅವಧಿ ಸೇರಿದಂತೆ ಎಲ್ಲ ಅಕ್ರಮಗಳನ್ನು ತನಿಖೆ ನಡೆಸಬೇಕೆಂದು ಸರಕಾರಕ್ಕೆ ಮನವಿ ಮಾಡಲಾಗುವುದು'
ಎಚ್.ಡಿ.ತಮ್ಮಯ್ಯ, ಶಾಸಕ
ನಗರ ಸಮೀಪದಲ್ಲಿ 5 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣ ಹಾಗೂ ಬೌದ್ಧ ವಿಹಾರ ನಿರ್ಮಾಣ ಮಾಡಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳನ್ನು ಮುಂದಿನ ಪೀಳಿಗೆಗೆ ಸಾರಲು ಕ್ರಮವಹಿಸಲಾಗುವುದು.
- ಎಚ್.ಡಿ.ತಮ್ಮಯ್ಯ, ಶಾಸಕ