×
Ad

ನೂತನ ಸರಕಾರದ ಸಂಪುಟದಲ್ಲಿ ನನಗೆ ಅವಕಾಶ ಸಿಗುವ ವಿಶ್ವಾಸವಿದೆ: ನಸೀರ್ ಅಹ್ಮದ್‌

Update: 2023-05-18 12:23 IST

ಬೆಂಗಳೂರು: ವಿಧಾನಸಭೆಯ ಚುನಾವಣೆಯಲ್ಲಿ ಮತದಾರರು, ಪ್ರಜಾಪ್ರಭುತ್ವ, ಜಾತ್ಯತೀತ ತತ್ವ, ಸಂವಿಧಾನದ ಆಶಯ ಹಾಗೂ ಸಹೋದರತ್ತ ರಕ್ಷಿಸಲು ಈ ಜನಾದೇಶವನ್ನು ನೀಡಿದ್ದಾರೆ. ಆ ಮೂಲಕ ಕಾಂಗ್ರೆಸ್ ಪಕ್ಷದ ಮೇಲೆ ಬಹುದೊಡ್ಡ ಜವಾಬ್ದಾರಿಯನ್ನು ವಹಿಸಿದ್ದಾರೆ. ಈನೂತನ ಸರಕಾರದ ಸಂಪುಟದಲ್ಲಿ ನನಗೆ ಅವಕಾಶ ಸಿಗುವ ವಿಶ್ವಾಸವಿದೆ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಹಾಗೂ ವಿಧಾನ ಪಷತ್ ಸದಸ್ಯ ನಸೀರ್ ಅಹ್ಮದ್‌ ಅಭಿಪ್ರಾಯಪಟ್ಟಿದ್ದಾರೆ.

ವಿಧಾನಸಭೆ ಚುನಾವಣೆಯ ಫಲಿತಾಂಶ ಹಾಗೂ ಮುಂದಿನ ದಿನಗಳಲ್ಲಿ ಸರಕಾರ ಯಾವ ರೀತಿ ಆಡಳಿತ ನಡೆಸಬೇಕು ಎಂಬುದರ ಕುರಿತು 'ವಾರ್ತಾಭಾರತಿ' ಪತ್ರಿಕೆಯೊಂದಿಗೆ ಅವರು ತಮ್ಮ ಮನದಾಳದ

ವಿಧಾನಸಭೆ ಚುನಾವಣೆಯ ಫಲಿತಾಂಶ ಹಾಗೂ ಮುಂದಿನ ದಿನಗಳಲ್ಲಿ ಸರಕಾರ ಯಾವ ರೀತಿ ಆಡಳಿತ ನಡೆಸಬೇಕು ಎಂಬುದರ ಕುರಿತು ‘ವಾರ್ತಾಭಾರತಿ’ ಪತ್ರಿಕೆಯೊಂದಿಗೆ ಅವರು ತಮ್ಮ ಮನದಾಳದ ಮಾತುಗಳನ್ನು ಈ ರೀತಿ ಹಂಚಿಕೊಂಡಿದ್ದಾರೆ. 

ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರು ಪ್ರಮುಖ ಪಾತ್ರ ವಹಿಸಿದ್ದಾರೆ. ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಉಳಿಸಲು ಈ ಜನಾದೇಶ ನೀಡಲಾಗಿದೆ. ಮುಂಬರುವ ದಿನಗಳಲ್ಲೂ ಎಲ್ಲರೂ ಒಗ್ಗಟ್ಟಾಗಿ ಇದೇ ರೀತಿ ಕೆಲಸ ಮಾಡುತ್ತೇವೆ ಎಂಬ ಸಂದೇಶವನ್ನು ರಾಜ್ಯದ ಮತದಾರರು ದೇಶಕ್ಕೆ ನೀಡಿದ್ದಾರೆ ಎಂದು ಅವರು ಹೇಳಿದರು.

ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಸಮಾಜವನ್ನು ವಿಭಜಿಸಲು, ಧರ್ಮ-ಧರ್ಮಗಳ ನಡುವೆ ಸಂಘರ್ಷ ಏರ್ಪಡಿಸುವ ನಿಟ್ಟಿನಲ್ಲಿ ಸಂಘಪರಿವಾರ ಹಾಗೂ ಬಿಜೆಪಿ ಸರಕಾರ ನಡೆಸಿದಂತಹ ಒಡೆದು ಆಳುವ ಪ್ರಯತ್ನಗಳನ್ನು ಜನ ವಿಫಲಗೊಳಿಸಿದ್ದಾರೆ. ನೂತನ ಸರಕಾರವು ಜನರು ಬದಲಾವಣೆ ಕಾಣುವಂತೆ ಆಡಳಿತ ನಡೆಸಬೇಕು ಎಂದು ನಸೀರ್ ಅಹ್ಮದ್ ತಿಳಿಸಿದರು.

ಸಚಿವ ಸಂಪುಟದಲ್ಲಿ ಸ್ವಚ್ಛ ಚಾರಿತ್ರ್ಯವನ್ನು ಹೊಂದಿರುವವರಿಗೆ ಅವಕಾಶ ನೀಡಬೇಕು. ಸಚಿವ ಸ್ಥಾನ ಅನ್ನೋದು ವ್ಯಕ್ತಿಯ ವರ್ಚಸ್ಸು ಹೆಚ್ಚಿಸಿಕೊಳ್ಳುವ ಸಾಧನವಲ್ಲ. ಅದು ಕಠಿಣ ಪರಿಶ್ರಮದ ಮೂಲಕ ಜನರ ನಿರೀಕ್ಷೆಗಳನ್ನು ಈಡೇರಿಸುವ ಜವಾಬ್ದಾರಿ ಅನ್ನೋದನ್ನು ಮರೆಯಬಾರದು. ಸಂಪುಟದಲ್ಲಿ ಅನುಭವಿಗಳಿಗೆ ಆದ್ಯತೆ ನೀಡಬೇಕು ಎಂದು ಅವರು ಮನವಿ ಮಾಡಿದರು.

ಸಮಾನ ಅವಕಾಶ: 1999ರಲ್ಲಿ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರಕಾರ ಸಚಿವ ಸಂಪುಟದಲ್ಲಿ ಅಲ್ಪಸಂಖ್ಯಾತರು, ಒಕ್ಕಲಿಗ, ಲಿಂಗಾಯತ, ಹಿಂದುಳಿದ, ಎಸ್ಸಿ-ಎಸ್ಟಿಗಳಿಗೆ ಸಮಾನ ಅವಕಾಶ ನೀಡಿತ್ತು. ಅದೇ ರೀತಿ ಈ ಸರಕಾರದಲ್ಲಿಯೂ ಎಲ್ಲರಿಗೂ ಸಮಾನ ಅವಕಾಶ ನೀಡಬೇಕು ಎಂದು ನಸೀರ್ ಅಹ್ಮದ್ ಹೇಳಿದರು.

ಅಲ್ಪಸಂಖ್ಯಾತ ಸಮುದಾಯದವರು ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಅವರ ಕೊಡುಗೆಯನ್ನು ಪಕ್ಷ ಪರಿಗಣಿಸಬೇಕು. ಅವರಿಗೆ ಸರಕಾರದಲ್ಲಿ ಸೂಕ್ತ ಪ್ರಾತಿನಿಧ್ಯವನ್ನು ನೀಡಬೇಕು. ಇದರಿಂದಾಗಿ, 2024ರ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಲಾಭವಾಗಲಿದೆ ಎಂದು ಅವರು ತಿಳಿಸಿದರು.

ಮೊಸಳೆ ಕಣ್ಣೀರು ಸುರಿಸಿದ ಬಿಜೆಪಿ ಸರಕಾರ: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದರೂ ಎಸ್ಸಿ-ಎಸ್ಟಿಗಳಿಗೆ ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ಸಂವಿಧಾನದ ಶೆಡ್ಯೂಲ್ 9ರಲ್ಲಿ ಸೇರಿಸುವ ಕೆಲಸವನ್ನು ಮಾಡದೆ, ಆ ಸಮುದಾಯಗಳ ಭಾವನೆಗಳೊಂದಿಗೆ ಚೆಲ್ಲಾಟವಾಡಿತ್ತು ಎಂದು ನಸೀರ್ ಅಹ್ಮದ್ ಕಿಡಿಗಾರಿದರು. 

ತಮಿಳುನಾಡಿನಲ್ಲಿ ಮೀಸಲಾತಿ ಪ್ರಮಾಣ ಶೇ.64ರಷ್ಟು ಇದೆ. ಅದೇ ರೀತಿಯ ಬದ್ಧತೆಯನ್ನು ಬಿಜೆಪಿ ಪ್ರದರ್ಶಿಸಬೇಕಿತ್ತು. ಆದರೆ, ಬಿಜೆಪಿ ಸರಕಾರ ಕೇವಲ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂಬುದನ್ನು ಜನ ಅರ್ಥ ಮಾಡಿಕೊಂಡು ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಈ ವಿಷಯವನ್ನು ಕಾಂಗ್ರೆಸ್ ಸರಕಾರ ಗಂಭೀರವಾಗಿ ಪರಿಗಣಿಸಿ, ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಕಾಂತರಾಜ್ ಆಯೋಗದ ವರದಿಯನ್ನು ಬಹಿರಂಗಪಡಿಸಿ, ಅದರ ಆಧಾರದಲ್ಲಿ ಸುಪ್ರೀಂಕೋರ್ಟ್‍ನಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಳದ ಬೇಡಿಕೆ ಇಡಬೇಕು. ಮುಸ್ಲಿಮರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವಲ್ಲಿ ಈ ಬಾರಿ ಬುದ್ಧಿಜೀವಿಗಳು, ಧಾರ್ಮಿಕ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ವೃತ್ತಿಪರರು, ಅಧಿಕಾರಿಗಳು, ಸಂಘ ಸಂಸ್ಥೆಗಳು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರು ಎಂದು ಅವರು ಹೇಳಿದರು.

ಬಿಜೆಪಿ ಸರಕಾರದ ಮೂರುವರೆ ವರ್ಷಗಳ ಆಡಳಿತದಲ್ಲಿ ಮುಸ್ಲಿಮ್ ಸಮುದಾಯ ಅನುಭವಿಸಿದ ನೋವು, ಯಾತನೆಯನ್ನು ಅಂತ್ಯಗೊಳಿಸಲು ಸಮುದಾಯದ ಪ್ರಬುದ್ಧ ಮತದಾರರು ಉತ್ತಮ ತೀರ್ಮಾನ ಕೈಗೊಂಡರು. ಮುಸ್ಲಿಮರಿಗೆ ಜನಸಂಖ್ಯೆಗೆ ಅನುಗುಣವಾಗಿ ಶಾಸನ ಸಭೆಗಳಲ್ಲಿ ಪ್ರಾತಿನಿಧ್ಯ ಸಿಗಬೇಕು. ಈ ಸಂಬಂಧ ಪಕ್ಷದ ಹೈಕಮಾಂಡ್ ಜೊತೆ ನಿರಂತರವಾಗಿ ಚರ್ಚೆಗಳನ್ನು ನಡೆಸುತ್ತೇವೆ ಎಂದು ನಸೀರ್ ಅಹ್ಮದ್ ತಿಳಿಸಿದರು.

ಅಲ್ಪಸಂಖ್ಯಾತರ ಕಲ್ಯಾಣದ ದೃಷ್ಟಿಯಿಂದ ನ್ಯಾ.ಸಾಚಾರ್ ವರದಿಯ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಬೇಕು ಎಂಬ ಚರ್ಚೆಗಳು ಹಿಂದಿನ ಸರಕಾರಗಳಲ್ಲಿಯೂ ನಡೆದಿತ್ತು. ಆದರೆ, ಅನುಷ್ಠಾನವಾಗಲಿಲ್ಲ. ಸಮಾನ ಅವಕಾಶಗಳ ಆಯೋಗ ರಚನೆ ಸೇರಿದಂತೆ ಇನ್ನಿತರ ಶಿಫಾರಸ್ಸುಗಳ ಅನುಷ್ಠಾನಕ್ಕೂ ಹೊಸ ಸರಕಾರ ಗಮನ ಹರಿಸಲಿದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.

ಶಾಸನಸಭೆಯಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ನಾಯಕರಲ್ಲಿ ನಾನು ಹಿರಿಯ. ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವವರ ಪೈಕಿಯೂ ನಾನು ಹಿರಿಯ. ಆದುದರಿಂದ, ಸಹಜವಾಗಿಯೆ ನೂತನ ಸರಕಾರದ ಸಂಪುಟದಲ್ಲಿ ನನಗೆ ಅವಕಾಶ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ನಸೀರ್ ಅಹ್ಮದ್ ತಿಳಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಬಿಜೆಪಿ ಮುಕ್ತ ಮಾಡಿದ್ದೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಇದೇ ಫಲಿತಾಂಶ ಪುನರಾವರ್ತನೆಯಾಗಲಿದೆ ಎಂದು ನಸೀರ್ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು.

‘ಬಿಜೆಪಿ ಸರಕಾರ ಪ್ರವರ್ಗ 2 ‘ಬಿ’ ಅಡಿಯಲ್ಲಿ ಮುಸ್ಲಿಮರಿಗೆ ಕಲ್ಪಿಸಲಾಗಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿದೆ. ಈ ಅನ್ಯಾಯವನ್ನು ನೂತನ ಸರಕಾರ ಸರಿಪಡಿಸಬೇಕು. ಜೊತೆಗೆ, ಸುಮಾರು 12 ಲಕ್ಷ ವಿದ್ಯಾರ್ಥಿಗಳು ಪ್ರೀ ಮೆಟ್ರಿಕ್, ಪೋಸ್ಟ್ ಮೇಟ್ರಿಕ್ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ವಿದ್ಯಾರ್ಥಿವೇತನ ಸಿಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’

-ನಸೀರ್ ಅಹ್ಮದ್, ವಿಧಾನ ಪರಿಷತ್ ಸದಸ್ಯ

Similar News