ಸುಧಾಕರ್ ವಿರುದ್ಧ ಗೆದ್ದ ನನ್ನನ್ನು ಕಾಂಗ್ರೆಸ್ ನಾಯಕರು ತಬ್ಬಿಕೊಂಡು ಸಂತೋಷಪಟ್ಟರು: ನೂತನ ಶಾಸಕ ಪ್ರದೀಪ್ ಈಶ್ವರ್
ಚಿಕ್ಕಳ್ಳಾಪುರ: ಆರೋಗ್ಯ ಸಚಿವರಾಗಿದ್ದ ಡಾ.ಕೆ ಸುಧಾಕರ್ ಅವರನ್ನು ಸೋಲಿಸಿದ್ದಕ್ಕೆ ಸಿದ್ದರಾಮಯ್ಯ ಹಾಲುಕುಡಿದಷ್ಟು ಖುಷಿಪಟ್ಟರು ಎಂದು ವಿಜೇತ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಧಾಕರ್ ವಿರುದ್ಧ ಗೆದ್ದಿದ್ದಕ್ಕೆ ನನ್ನನ್ನು ಸೆಲೆಬ್ರಿಟಿ ರೀತಿ ನೋಡುತ್ತಿದ್ದಾರೆ. ಜನರ ಪ್ರೀತಿ, ಅಭಿಮಾನ, ವಿಶ್ವಾಸಕ್ಕೆ ನಾನು ಚಿರಋಣಿ. ನಾನು ನಿರಂತರವಾಗಿ ಕ್ಷೇತ್ರದ ಜನರ ಜೊತೆ ಇರಲು ಬಯಸುತ್ತೇನೆ. ಚಿಕ್ಕಬಳ್ಳಾಪುರ ಕ್ಷೇತ್ರದ ಜನರ ಕಷ್ಟ, ಸುಖದಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ನನ್ನನ್ನು ಅಭಿನಂದಿಸಿ ಆಶೀರ್ವಾದ ಮಾಡಿದರು. ಕೆ.ಸಿ.ವೇಣುಗೋಪಾಲ್ ತಬ್ಬಿಕೊಂಡು ಸಂತೋಷ ಹಂಚಿಕೊಂಡರು. ಜನರು ನನ್ನ ಕಾರು ಅಡ್ಡ ನಿಲ್ಲಿಸಿ ಸೆಲ್ಫೀ ತೆಗೆದುಕೊಳ್ಳುತ್ತಿದ್ದಾರೆ. ಮಾಜಿ ಶಾಸಕರಂತೆ ನಾನು ಅಹಂಕಾರ ಪಡುವವನಲ್ಲ. ನಾನು ನಿರಂತರ ಜನರ ಜೊತೆ ಇರಲು ಬಯಸುತ್ತೇನೆ . ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೇನೆ. ಮಾದರಿ ಶಾಸಕನಾಗಲು ಅಧ್ಯಯನ ನಡೆಸಿದ್ದೇನೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಸಚಿವ ಸುಧಾಕರ್ ಅವರನ್ನು 11,318 ಮತಗಳ ಅಂತರದಿಂದ ಸೋಲಿಸುವ ಮೂಲಕ ಪ್ರದೀಪ್ ಈಶ್ವರ್ ಅಚ್ಚರಿಯ ಫಲಿತಾಂಶ ನೀಡಿದ್ದರು.