ಈಶಾನ್ಯ ರಾಜ್ಯವೆಂಬ ಸ್ಫೋಟಕಗಳ ಗೋದಾಮು

Update: 2023-05-18 19:30 GMT

ಮಣಿಪುರ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಶಾಂತಿ ನೆಲೆಸಬೇಕೆಂದರೆ, ಬಂಡುಕೋರರೊಂದಿಗೆ ಮಾತುಕತೆ-ಸಂಧಾನ ಬಿಟ್ಟು ಅನ್ಯಮಾರ್ಗವಿಲ್ಲ. ಮಣಿಪುರದಲ್ಲಿ ಮೈತೈಗಳು ಪರ್ವತ ಪ್ರದೇಶದವರಿಗೆ ನ್ಯಾಯಬದ್ಧ ಪಾಲು ಸಲ್ಲಿಸಲೇಬೇಕು. ಧಾರ್ಮಿಕ ಭೇದ ಹಾಗೂ ಜನಾಂಗೀಯ ಭಿನ್ನಾಭಿಪ್ರಾಯವನ್ನು ಪ್ರಜಾಸತ್ತಾತ್ಮಕವಾಗಿ ಬಗೆಹರಿಸಬೇಕು. ಕಣಿವೆಯ ಜನರು ಮತ್ತು ಪರ್ವತ ಪ್ರದೇಶದವರ ನಡುವೆ ಅಧಿಕಾರ ಮತ್ತು ಸಂಪನ್ಮೂಲ ಹಂಚಿಕೆಯಲ್ಲಿ ಸಮಾನತೆ ಇರಬೇಕು. ಇಲ್ಲದೆ ಹೋದಲ್ಲಿ, ಈ ಪ್ರದೇಶದಲ್ಲಿ ಶಾಂತಿ ಸ್ಥಾಪನೆ ಮರೀಚಿಕೆ ಆಗುತ್ತದೆ.


ದೇಶದ ಈಶಾನ್ಯದಲ್ಲಿರುವ ‘ಸಪ್ತ ಸೋದರಿ’ (ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರ) ಹಾಗೂ ‘ಸೋದರ’ ಸಿಕ್ಕಿಂ, ತಮ್ಮ ಭೂಪ್ರದೇಶದ ಶೇ.70ಕ್ಕೂ ಅಧಿಕ ಪ್ರದೇಶದಲ್ಲಿ ಅರಣ್ಯವನ್ನು ಹೊಂದಿರುವ ಜೈವಿಕ ಸಮೃದ್ಧ ರಾಜ್ಯಗಳು. ವಿಶ್ವ ವನ್ಯಜೀವಿ ನಿಧಿ ಪ್ರಕಾರ, ಪೂರ್ವ ಹಿಮಾಲಯ ಪ್ರದೇಶವು 200 ಜಾಗತಿಕ ಪರಿಸರ ಪ್ರಾಂತಗಳಲ್ಲಿ ಒಂದು ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿ ಪ್ರಕಾರ, ಭತ್ತದ ಜೀವದ್ರವ್ಯದ ಕೇಂದ್ರ; ನಿಂಬೆ ಗುಂಪಿಗೆ ಸೇರಿದ ಹಣ್ಣುಗಳ ಮೂಲಸ್ಥಾನ. ದೇಶದಲ್ಲಿರುವ ಹೂವು ಬಿಡುವ 15,000 ಸಸ್ಯ ಪ್ರಭೇದಗಳಲ್ಲಿ 8,000 ಈ ಪ್ರಾಂತದಲ್ಲಿವೆ ಮತ್ತು ಇವುಗಳಲ್ಲಿ 800 ಅಳಿವಿನ ಅಂಚಿನಲ್ಲಿವೆ(ಭಾರತೀಯ ಜೀವಶಾಸ್ತ್ರೀಯ ಸರ್ವೇಕ್ಷಣೆ ಸಂಸ್ಥೆ ಪ್ರಕಟಿಸುವ ರೆಡ್ ಬುಕ್ ಮಾಹಿತಿ).

ಟಿಬೆಟ್, ಮ್ಯಾನ್ಮಾರ್, ಬಾಂಗ್ಲಾದೇಶ, ನೇಪಾಳ ಮತ್ತು ಭೂತಾನ್ ಜೊತೆ ಗಡಿಯನ್ನು ಹಂಚಿಕೊಂಡಿರುವ ಈ ರಾಜ್ಯಗಳ ಒಟ್ಟು ಜನಸಂಖ್ಯೆ 4.5 ಕೋಟಿ(2011ರ ಜನಗಣತಿ) ಮತ್ತು ಒಟ್ಟು ವಿಸ್ತೀರ್ಣ 2.62 ಲಕ್ಷ ಚದರ ಕಿಲೋಮೀಟರ್. ಅಸ್ಸಾಮಿನ ಗುವಾಹಟಿ ಈ ರಾಜ್ಯಗಳಿಗೆ ಹೆಬ್ಬಾಗಿಲು ಮತ್ತು ಈ ರಾಜ್ಯಗಳ ಸಂಪರ್ಕ ಮಾರ್ಗ ಸಿಲಿಗುರಿ ಕಾರಿಡಾರ್. ತಮ್ಮದೇ ಭಾಷೆ-ಲಿಪಿ ಹೊಂದಿರುವ 200ಕ್ಕೂ ಅಧಿಕ ಆದಿವಾಸಿ ಸಮುದಾಯಗಳಿರುವ ಈ ಸಮೃದ್ಧ ನಾಡು ಹಿಂಸೆ-ನಿರಂತರ ಸಂಘರ್ಷಗಳಿಂದ ಬಸವಳಿದಿದೆ. ಅಸ್ಸಾಮಿನಲ್ಲಿ ಆರು ಸಮುದಾಯಗಳು(ಅಹೋಂ, ಮೊರನ್, ಮೊಟೋಕ್, ಛುತಿಯಾ, ಕೋಚ್ ರಾಜ್‌ಬೊಂಗ್ಷಿ ಮತ್ತು ಟೀ) ತಮ್ಮನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕೆಂದು, ನಾಗಾಲ್ಯಾಂಡ್‌ನಲ್ಲಿ ಪೂರ್ವ ನಾಗಾಲ್ಯಾಂಡ್‌ನ ಆರು ಜಿಲ್ಲೆಗಳನ್ನು ಒಳಗೊಂಡ ಪ್ರತ್ಯೇಕ ರಾಜ್ಯಕ್ಕಾಗಿ, ತ್ರಿಪುರದಲ್ಲಿ ಮೂಲವಾಸಿಗಳಿಗಾಗಿ ಗ್ರೇಟರ್ ತಿಪ್ರಾಲ್ಯಾಂಡ್‌ಗಾಗಿ, ಮೇಘಾಲಯದಲ್ಲಿ ಸಂವಿಧಾನದ 8ನೇ ಅನುಬಂಧಕ್ಕೆ ಖಾಸಿ ಮತ್ತು ಗಾರೋ ಭಾಷೆಗಳನ್ನು ಸೇರ್ಪಡೆಗೊಳಿಸಬೇಕು, ಎನ್‌ಆರ್‌ಸಿ ರಚಿಸಬೇಕು ಎಂದು, ಅರುಣಾಚಲ ಪ್ರದೇಶದಲ್ಲಿ 1964-69ರ ಅವಧಿಯಲ್ಲಿ ಬಾಂಗ್ಲಾದಿಂದ ವಲಸೆ ಬಂದ 65,000 ಅಧಿಕ ಚಕ್ಮಾ ಮತ್ತು ಹಜೋಂಗ್‌ಗಳನ್ನು ಹೊರಹಾಕಬೇಕೆಂದು ಮತ್ತು ಮಿಜೋರಾಂನಲ್ಲಿ ಬ್ರು ಹಾಗೂ ಮಿಜೋಗಳ ನಡುವೆ ಸಂಘರ್ಷ ಹಲವು ವರ್ಷಗಳಿಂದ ನಡೆಯುತ್ತಿದೆ. ಇದನ್ನು ನೆಪವಾಗಿರಿಸಿಕೊಂಡು ಒಕ್ಕೂಟ ಸರಕಾರ ಈ ರಾಜ್ಯಗಳ ಮೇಲೆ ‘ಕ್ಷೋಭೆಗೊಳಪಟ್ಟ ಪ್ರದೇಶಗಳು’ ಎಂಬ ಹಣೆಪಟ್ಟಿ ಹಚ್ಚಿ, 1958ರಲ್ಲಿ ಸಂಸತ್ತು ಅಂಗೀಕರಿಸಿದ ಅಫ್‌ಸ್ಪಾ(ಆರ್ಮಡ್ ಫೋರ್ಸಸ್ ಸ್ಪೆಷಲ್ ಪವರ್ಸ್ ಆ್ಯಕ್ಟ್) ಕಾಯ್ದೆಯಡಿ ಸೇನೆಯನ್ನು ನಿಯೋಜಿಸಿದೆ. ಜನರನ್ನು ಒಂದು ಕಡೆ ಸೈನಿಕರು, ಇನ್ನೊಂದೆಡೆ ಬಂಡುಕೋರರು ಪೀಡಿಸುತ್ತಾರೆ. ಅತ್ಯಾಚಾರ, ಹಲ್ಲೆ, ಹತ್ಯೆಗಳು ದಿನನಿತ್ಯದ ಸಂಗತಿಯಾಗಿಬಿಟ್ಟಿದೆ. ಬುಡಕಟ್ಟುಗಳ ನಡುವೆ ಬಡಿದಾಟ ನಿಂತಿಲ್ಲ. ಶಾಂತಿ ಎನ್ನುವುದು ಮರೀಚಿಕೆ ಆಗಿಬಿಟ್ಟಿದೆ.

ಇಂಥ ಸಂಘರ್ಷಕ್ಕೆ ಇತ್ತೀಚಿನ ಸೇರ್ಪಡೆ-ಮಣಿಪುರದಲ್ಲಿ ಮೈತೈ ಮತ್ತು ಕುಕಿ-ನಾಗಾಗಳ ನಡುವಿನ ಮೀಸಲು ಕುರಿತು ನಡೆದ ಗಲಭೆ. ಮಣಿಪುರದ ಒಟ್ಟು ವಿಸ್ತೀರ್ಣದಲ್ಲಿ ಶೇ.10ರಷ್ಟು ಭೂಪ್ರದೇಶವಿದೆ; ಉಳಿದಿದ್ದು ಬೆಟ್ಟ-ಗುಡ್ಡಗಾಡು ಪ್ರದೇಶ. ರಾಜ್ಯವು ಕಣಿವೆ ಹಾಗೂ ಪರ್ವತ-ಗುಡ್ಡಗಾಡು ಪ್ರದೇಶ ಎಂದು ಎರಡಾಗಿ ವಿಭಜಿಸಲ್ಪಟ್ಟಿದ್ದು, ಕಣಿವೆ ಪ್ರದೇಶದಲ್ಲಿ ಪೂರ್ವ/ಪಶ್ಚಿಮ ಇಂಫಾಲ್, ವಿಷ್ಣುಪುರ ಮತ್ತು ಥೌಬಾಲ್ ಜಿಲ್ಲೆಗಳಿವೆ. ಇಲ್ಲಿರುವವರಲ್ಲಿ ಶೇ.99ರಷ್ಟು ಮೈತೈಗಳು. ಇವರಲ್ಲಿ ಶೇ.83 ಮಂದಿ ಹಿಂದೂಗಳು, ಶೇ.8.4 ಮುಸ್ಲಿಮರು(ಪಂಗಲ್‌ಗಳು), ಶೇ.1ರಷ್ಟು ಕ್ರಿಶ್ಚಿಯನ್ನರು ಹಾಗೂ ಉಳಿದವರು ಸನಾಮಹಿ ಎಂಬ ಮೂಲವಾಸಿ ಧಾರ್ಮಿಕ ಗುಂಪಿಗೆ ಸೇರಿದವರು. ಕಣಿವೆ ಪ್ರದೇಶದಲ್ಲಿ ಕಾಡುಗಳಿಲ್ಲ. ಉತ್ತಮ ಶಿಕ್ಷಣ, ಆಸ್ಪತ್ರೆಗಳು, ಅಡುಗೆ ಇಂಧನ ಪೂರೈಕೆಯಿದ್ದು, ಸರಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ನೌಕರಿ ಗಿಟ್ಟಿಸಿದ್ದಾರೆ. ಜತೆಗೆ, ಪ್ರವಾಸೋದ್ಯಮದಿಂದ ಲಾಭ ಪಡೆಯುತ್ತಿದ್ದಾರೆ. ಮೈತೈ ಸಂವಿಧಾನದ 9ನೇ ಅನುಬಂಧದಲ್ಲಿರುವ 22 ಭಾಷೆಗಳಲ್ಲಿ ಒಂದು. ಗುಡ್ಡಗಾಡು ಪ್ರದೇಶದಲ್ಲಿ 34 ಬುಡಕಟ್ಟು ಸಮುದಾಯಗಳಿದ್ದು, ಕುಕಿ ಮತ್ತು ನಾಗಾ ಪ್ರಮುಖ ಗುಂಪುಗಳು. ಜನಸಂಖ್ಯೆಯ ಶೇ.90ರಷ್ಟು ಮಂದಿ ಕ್ರಿಶ್ಚಿಯನ್ನರು. ವಿದ್ಯಾಭ್ಯಾಸ ಸೌಲಭ್ಯವಿಲ್ಲದ ಗ್ರಾಮೀಣ ಮಂದಿ. ತಂಗ್ಖುಲ್, ತಾಡೋ, ಕಬುಯಿ ಅಥವಾ ಮಾವೋ ಭಾಷೆ ಮಾತನ್ನಾಡುತ್ತಾರೆ. ಪರ್ವತ ಪ್ರದೇಶವಾದ್ದರಿಂದ, ಉದ್ಯೋಗಾವಕಾಶ ಮತ್ತು ಮೂಲಸೌಲಭ್ಯಗಳು ಕಡಿಮೆ. ಸೇನಾಪತಿ, ಚುರಚಂದ್‌ಪುರ, ಉಖ್ರುಲ್, ಚಂಡೇಲ್ ಮತ್ತು ತಮೆಂಗ್‌ಲಾಂಗ್ ಜಿಲ್ಲೆಗಳಲ್ಲಿ ಮಣಿಪುರಿ ಭಾಷಿಕರ ಪ್ರಮಾಣ ಶೇ.4. ಜಿರಿಜಿರಿ ರಾಜಧಾನಿ ಇಂಫಾಲನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿ ಹಾಗೂ ಭಾಗಶಃ ಪೂರ್ಣಗೊಂಡಿರುವ ರೈಲು ಮಾರ್ಗದ ಆರಂಭ ಬಿಂದು. ಇನ್ನೊಂದು ಹೆದ್ದಾರಿ ನಾಗಾಲ್ಯಾಂಡ್ ಮೂಲಕ ಉತ್ತರದೆಡೆಗೆ ಹೋಗುತ್ತದೆ. ಈ ಹೆದ್ದಾರಿಗಳಲ್ಲಿ ಪ್ರತಿಭಟನೆ ಇತ್ಯಾದಿಯಿಂದ ಸಂಚಾರಕ್ಕೆ ಅಡೆತಡೆ ಯುಂಟಾದರೆ, ಕಣಿವೆ ಹಾಗೂ ರಾಜ್ಯದ ಇತರೆಡೆಗೆ ಇಂಧನ, ಆಹಾರ ಹಾಗೂ ಔಷಧಗಳ ಕೊರತೆ ಉಂಟಾಗುತ್ತದೆ. ಕೋಲಾಹಲ ಸೃಷ್ಟಿಯಾಗುತ್ತದೆ.

ಸಂಘರ್ಷಕ್ಕೆ ದೀರ್ಘ ಇತಿಹಾಸ
ಮೈತೈ ಹಾಗೂ ಕುಕಿ-ನಾಗಾಗಳ ನಡುವಿನ ಸಂಘರ್ಷಕ್ಕೆ ದೀರ್ಘ ಇತಿಹಾಸವಿದೆ. 1992-93ರಲ್ಲಿ ನಾಗಾ ಪ್ರತ್ಯೇಕತಾವಾದಿ ಗುಂಪು(ಎನ್‌ಎಸ್‌ಸಿಎನ್-ಎಂ), 115 ಕುಕಿಗಳ ಹತ್ಯೆ ನಡೆಸಿತ್ತು. 1993ರಲ್ಲಿ ಹಿಂದೂ ಮೈತೈಗಳು 100 ಮುಸ್ಲಿಮ್ ಮೈತೈಗಳನ್ನು ಹತ್ಯೆಗೈದಿದ್ದರು. 2017ರಲ್ಲಿ ನಾಗಾಗಳು 3 ತಿಂಗಳು ಕಾಲ ಹೆದ್ದಾರಿ ಬಂದ್ ನಡೆಸಿ, ಕಣಿವೆ ಪ್ರದೇಶಕ್ಕೆ ಯಾವುದೇ ಸರಕು ಪೂರೈಕೆಯಾಗದಂತೆ ತಡೆದಿದ್ದರು. ಕುಕಿ ಪ್ರತ್ಯೇಕತಾವಾದಿಗಳು 2008ರಿಂದ ಸರಕಾರದೊಡನೆ ಮಾತುಕತೆ ನಡೆಸುತ್ತಿಲ್ಲ. ಜೊತೆಗೆ, ಮೈತೈಗಳ ಪ್ರತ್ಯೇಕತಾವಾದಿ ಗುಂಪುಗಳಾದ ಯುಎನ್‌ಎಲ್‌ಎಫ್, ಕೆವೈಕೆಎಲ್, ಕೆಸಿಪಿ, ಪಿಎಲ್‌ಎ, ಪ್ರಿಪಾಕ್ ಇತ್ಯಾದಿ ಕೂಡ ಸಂಧಾನಕ್ಕೆ ಮುಂದಾಗುತ್ತಿಲ್ಲ. ಪರ್ವತ ಪ್ರದೇಶದಲ್ಲಿ ಬಲಿಷ್ಠ ಹಿಡಿತವಿರುವ ಎನ್‌ಎಸ್‌ಸಿಎನ್(ಐಎಂ) ಮಾತ್ರ ಮಾತುಕತೆ ನಡೆಸುತ್ತಿದೆ. ಕೆಲವು ಕುಕಿ ಬಂಡುಕೋರ ಗುಂಪುಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದರೂ, ಅಂತಿಮ ಒಪ್ಪಂದ ಆಗಬೇಕಿದೆ. ಒಟ್ಟಾರೆ ಅಯೋಮಯ ಪರಿಸ್ಥಿತಿಯಿದ್ದು, ರಾಜ್ಯ-ಒಕ್ಕೂಟ ಸರಕಾರಗಳು ಸಮಸ್ಯೆ ಬಗೆಹರಿಸುವ ಆಸಕ್ತಿ ತೋರಿಸುತ್ತಿಲ್ಲ.

ಮೈತೈಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬಹುದೇ ಎಂಬುದನ್ನು ಪರಿಶೀಲಿಸಬೇಕು ಎಂಬ ಮಣಿಪುರ ಹೈಕೋರ್ಟ್‌ನ ಮಾರ್ಚ್ 27ರ ಆದೇಶವು ಕುಕಿ-ಚಿನ್ ಸಮುದಾಯದಲ್ಲಿ ಆತಂಕ ಸೃಷ್ಟಿಸಿತು. ಮ್ಯಾನ್ಮಾರ್‌ನಿಂದ ಬಂದ ಅಕ್ರಮ ವಲಸೆಕೋರರನ್ನು ಪತ್ತೆ ಹಚ್ಚಲು ನಾಗರಿಕರ ರಾಷ್ಟ್ರೀಯ ರಿಜಿಸ್ಟರ್(ಎನ್‌ಆರ್‌ಸಿ) ಬಳಸಬೇಕು ಮತ್ತು 1961ಕ್ಕಿಂತ ಮೊದಲು ಬಂದವರನ್ನು ಮಾತ್ರ ಭಾರತೀಯರೆಂದು ಪರಿಗಣಿಸಬೇಕು ಎಂಬ ಮೈತೈಗಳ ಬೇಡಿಕೆಗೆ ಕುಕಿ-ನಾಗಾಗಳಿಂದ ಮತ್ತು ಮಣಿಪುರದಲ್ಲಿ ನಾಗಾಗಳ ಬಾಹುಳ್ಯವಿರುವ ಪ್ರದೇಶಗಳನ್ನು ಉದ್ದೇಶಿತ ‘ಗ್ರೇಟರ್ ನಾಗಾಲ್ಯಾಂಡ್’ನಲ್ಲಿ ಸೇರ್ಪಡೆಗೊಳಿಸಬೇಕೆಂಬ ನಾಗಾಗಳ ಬೇಡಿಕೆಯನ್ನು ಮೈತೈ-ಕುಕಿ-ಚಿನ್‌ಗಳು ವಿರೋಧಿಸುತ್ತಿದ್ದಾರೆ. ನಾಗಾಗಳು ಕುಕಿ-ಚಿನ್ ಗುಂಪುಗಳನ್ನು ನಿರಾಶ್ರಿತರು ಎನ್ನುತ್ತಾರೆ ಮತ್ತು ಮಣಿಪುರ ಸರಕಾರ ಈ ಸಮುದಾಯಗಳ ಚಲನವಲನದ ಮೇಲೆ ನಿರ್ಬಂಧ ಹೇರಿದೆ. ಕೊಬ್ರು ದೇವಳ ಹಾಗೂ ಆಂಗ್ಲೋ-ಕುಕಿ ಯುದ್ಧ ಸ್ಮಾರಕದ ಮೇಲೆ ನಡೆದ ದಾಳಿ, ಅಕ್ರಮ ವಲಸೆಗಾರರನ್ನು ಅರಣ್ಯದಿಂದ ತೆರವುಗೊಳಿಸುತ್ತಿರುವುದು ಮತ್ತು ಅಫೀಮು ಬೆಳೆ ನಾಶ ಇತ್ಯಾದಿಯಿಂದ ಸ್ಥಳಾಂತರಗೊಂಡ ಮತ್ತು ವಲಸೆ ಬಂದ ಕುಕಿ-ಚಿನ್ ಸಮುದಾಯದಲ್ಲಿ ಆತಂಕ ಸೃಷ್ಟಿಸಿತ್ತು. ಜೊತೆಗೆ, ಮೈತೈಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಹಾಗೂ ಮೀಸಲು ನೀಡಲು ರಾಜ್ಯ ಸರಕಾರ ಒಲವು ತೋರಿಸಿರುವುದು ನಾಗಾ-ಕುಕಿಗಳನ್ನು ಕೆರಳಿಸಿತು. ಪರಸ್ಪರ ಅಪನಂಬಿಕೆ, ಸಂಶಯ ಹಾಗೂ ದ್ವೇಷದ ಪರಿಣಾಮವೇ ಮೇ 3ರ ಪ್ರತಿಭಟನಾ ರ್ಯಾಲಿ; ಆನಂತರ ಚುರಚಾಂದ್‌ಪುರದಲ್ಲಿ ಆರಂಭವಾದ ಗಲಭೆ, ಮಣಿಪುರವಿಡೀ ವ್ಯಾಪಿಸಿತು. ಹಿಂಸಾಚಾರದಲ್ಲಿ 60ಕ್ಕೂ ಹೆಚ್ಚು ಮಂದಿ ಸಾವು, 1,700ಕ್ಕೂ ಅಧಿಕ ಮನೆಗಳು ಭಸ್ಮವಾದವು ಮತ್ತು 35,000ಕ್ಕೂ ಅಧಿಕ ಮಂದಿ ನಿರ್ವಸಿತರಾದರು. ಪೊಲೀಸರಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲಾಯಿತು.

ಭೂಮಿಗೆ ಬೇಡಿಕೆ ಹೆಚ್ಚಳ
ರಾಜ್ಯ ಬೆಟ್ಟಗುಡ್ಡಗಳಿಂದ ಆವೃತವಾಗಿರುವುದರಿಂದ, ಭೂಮಿಯ ಪ್ರಮಾಣ ಕಡಿಮೆಯಿದೆ ಮತ್ತು ಜನಸಂಖ್ಯೆ ಹೆಚ್ಚಳದಿಂದ ಕೃಷಿ-ವಾಣಿಜ್ಯ ಉದ್ದೇಶಕ್ಕೆ ಭೂಮಿಗೆ ಬೇಡಿಕೆ ಹೆಚ್ಚಿದೆ. 1960ರ ಮಣಿಪುರ ಭೂಮಿ ಕಂದಾಯ ಮತ್ತು ಭೂ ಸುಧಾರಣೆ ಕಾಯ್ದೆ(ಎಂಎಲ್‌ಆರ್‌ಎಲ್‌ಆರ್), ಕೃಷಿಕರಲ್ಲದವರು ಕೃಷಿ ಭೂಮಿಯನ್ನು ಹೊಂದಲು ಅವಕಾಶ ನೀಡಿತು. ಕಾಯ್ದೆಯ 3ನೇ ವಿಧಿಗೆ ತಿದ್ದುಪಡಿ ತಂದು, ಕಣಿವೆ ಜಿಲ್ಲೆಗಳಲ್ಲಿ ಭೂಮಿಯ ಕೊರತೆಯನ್ನು ನೀಗಿಸಲು ಆದಿವಾಸಿ ಪ್ರದೇಶಗಳಲ್ಲಿ ಭೂಮಿಯನ್ನು ಖರೀದಿಸುವ ಪ್ರಯತ್ನ ನಡೆಯಿತು. ಇದರಿಂದ ಆದಿವಾಸಿಗಳ ರಕ್ಷಣೆಗೆಂದು ರಚನೆಯಾದ ಗುಡ್ಡಗಾಡು ಪ್ರದೇಶಗಳ ಜಿಲ್ಲಾ ಸ್ವಾಯತ್ತ ಮಂಡಳಿಗಳ ಅಧಿಕಾರಕ್ಕೆ ಭಂಗವುಂಟಾಯಿತು. ಇದರಿಂದ ಹಲವು ಆದಿವಾಸಿ ಸಮುದಾಯಗಳಿರುವ ರಾಜ್ಯದ ಸಂಕೀರ್ಣ ಸಾಮಾಜಿಕ ನೇಯ್ಗೆಗೆ ಹಾನಿಯುಂಟಾಯಿತು. ಕಣಿವೆ ಮತ್ತು ಬೆಟ್ಟಗುಡ್ಡ ಪ್ರದೇಶದ ನಡುವೆ ಸ್ಪಷ್ಟ ವಿಭಾಗ ರೇಖೆ ಸೃಷ್ಟಿಯಾಯಿತು.

ಬುಡಕಟ್ಟು ಸಮುದಾಯಗಳಿಗೆ ಸಂವಿಧಾನದ ವಿಧಿ 371ಸಿ ಅನ್ವಯ ಅರಣ್ಯದ ಮೇಲೆ ವಿಶೇಷ ಹಕ್ಕು ಇದೆ. 2006ರ ಅರಣ್ಯ ಹಕ್ಕುಗಳ ಕಾಯ್ದೆ ಕೂಡ ಈ ಹಕ್ಕುಗಳನ್ನು ಎತ್ತಿಹಿಡಿದಿದೆ. ಗುಡ್ಡಗಾಡು ಅರಣ್ಯ ಸಮಿತಿಗಳಲ್ಲದೆ, ಸಂವಿಧಾನದ 6ನೇ ಅನುಬಂಧದಡಿ ಸ್ವಾಯತ್ತ ಜಿಲ್ಲಾ ಮಂಡಳಿಗಳಿವೆ. ಈ ಪ್ರದೇಶದಲ್ಲಿ ಯಾವುದೇ ಬದಲಾವಣೆ ತರಬೇಕಿದ್ದರೆ, ಗುಡ್ಡಗಾಡು ಸಮಿತಿ ಮತ್ತು ಸ್ವಾಯತ್ತ ಜಿಲ್ಲಾ ಮಂಡಳಿಗಳ ಅನುಮತಿ ಅಗತ್ಯ. ಆದರೆ, ರಾಜ್ಯ ಸರಕಾರ ಈ ಸಮುದಾಯಗಳ ಅರಣ್ಯ ಹಕ್ಕುಗಳನ್ನು ಹತ್ತಿಕ್ಕುತ್ತಿದೆ. ‘ರಾಜ್ಯದ ಎಲ್ಲ ಜಾಗ ಸರಕಾರಕ್ಕೆ ಸೇರಿದ್ದು’ ಎಂದಿರುವ ಸರಕಾರ, ಕಾಂಗ್‌ಪೌಷ್ಟಿ ಜಿಲ್ಲೆಯ ಕೌಬ್ರು ಪರ್ವತ ಪ್ರದೇಶದ ಅರಣ್ಯವನ್ನು ಮೀಸಲು ಅರಣ್ಯ ಎಂದು ಘೋಷಿಸಿದೆ. ಜತೆಗೆ, ಕುಕಿ ಬಂಡುಕೋರರ ಜತೆಗಿನ ಕದನ ವಿರಾಮವನ್ನು ಸರಕಾರ ಅಮಾನತು ಮಾಡಿದೆ. ಇದು ಸಂವಿಧಾನಬಾಹಿರ ಎಂದು ಕುಕಿ ವಿದ್ಯಾರ್ಥಿ ಸಂಘಟನೆಗಳು ದೂರುತ್ತವೆ. ‘ಗುಡ್ಡ ಗಾಡು-ಪರ್ವತ ಪ್ರದೇಶದಲ್ಲಿ ಶೇ.41ರಷ್ಟು ಮಂದಿ ವಾಸಿಸುತ್ತಿದ್ದು, ನಾವು ಈ ಪರ್ವತದ ಒಡೆಯರು. ಸಮುದಾಯ ಅರಣ್ಯವನ್ನು ಮೀಸಲು ಅರಣ್ಯ ಎಂದು ಘೋಷಿಸುವ ಅಧಿಕಾರ ಸರಕಾರಕ್ಕಿಲ್ಲ’ ಎನ್ನುವುದು ನಾಗಾ-ಕುಕಿಗಳ ವಾದ.

ಮೈತೈಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಕ್ಕೆ ಮತ್ತು ಮೀಸಲು ನೀಡುವುದಕ್ಕೆ ಕುಕಿ-ನಾಗಾಗಳಿಂದ ಪ್ರತಿರೋಧ ವ್ಯಕ್ತವಾಗಿದೆ. ‘ಮೈತೈಗಳು ಬುಡಕಟ್ಟು ಸಮುದಾಯವಲ್ಲ. ಸಾವಿರಾರು ವರ್ಷದಿಂದ ನಗರಗಳಲ್ಲಿ ವಾಸಿಸುತ್ತಿರುವವರು ಬುಡಕಟ್ಟು ಸಮುದಾಯ ಆಗಲು ಸಾಧ್ಯವಿಲ್ಲ. ಆದ್ದರಿಂದಲೇ ಸ್ವಾತಂತ್ರ್ಯಾನಂತರ ಅವರನ್ನು ಪರಿಶಿಷ್ಟ ಪಂಗಡ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಸಮುದಾಯ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುಂದುವರಿದಿರುವುದರಿಂದ, ಎಸ್‌ಟಿ ಪಟ್ಟಿಗೆ ಸೇರ್ಪಡೆ ನ್ಯಾಯಸಮ್ಮತವಲ್ಲ. ಈಗಾಗಲೇ ಮೈತೈಗಳಿಗೆ ಇತರ ಹಿಂದುಳಿದ ವರ್ಗಗಳ ಅಡಿ ಶೇ.17, ಪರಿಶಿಷ್ಟ ಜಾತಿಯಡಿ ಶೇ.2 ಮತ್ತು ಇಡಬ್ಲ್ಯುಎಸ್ ಅಡಿ ಶೇ.10 ಮೀಸಲು ನೀಡಲಾಗುತ್ತಿದೆ. ಆದರೆ, ಪರಿಶಿಷ್ಟ ಪಂಗಡಗಳಿಗೆ ಇರುವ ಮೀಸಲು ಶೇ.31. ಮೈತೈಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಿದರೆ, ನಮಗೆ ಅನ್ಯಾಯವಾಗುತ್ತದೆ. ಇನ್ನಷ್ಟು ಬದಿಗೊತ್ತಲ್ಪಡುತ್ತೇವೆ’ ಎನ್ನುವುದು ಕುಕಿ-ನಾಗಾಗಳ ವಾದ. ಪಿತ್ರಾರ್ಜಿತ ಆಸ್ತಿ, ಅಸ್ಮಿತೆ, ಸಂಪ್ರದಾಯಗಳು, ಭಾಷೆ ಹಾಗೂ ಅಸ್ಮಿತೆಯನ್ನು ಉಳಿಸಿಕೊಳ್ಳಲು ಪರಿಶಿಷ್ಟ ಪಂಗಡ ಸ್ಥಾನಮಾನ ಅಗತ್ಯ ಎನ್ನುವುದು ಮೈತೈಗಳ ವಾದ. ಮಣಿಪುರ ವಿಧಾನಸಭೆಗೆ ಆಯ್ಕೆಯಾದ 60 ಶಾಸಕರಲ್ಲಿ(ಬಿಜೆಪಿ 32, ಎನ್‌ಪಿಪಿ 7 ಹಾಗೂ ಇತರರು 21) ಮೈತೈಗಳ ಪಾಲು 40. ಮುಖ್ಯಮಂತ್ರಿ ಬಿರೇನ್‌ಸಿಂಗ್ ಇದೇ ಸಮುದಾಯದವರು. ಇಂಫಾಲ ಮತ್ತು ಜಿರಿಬಿಂ ಕಣಿವೆಯಿಂದ 40 ಹಾಗೂ ಪರ್ವತ-ಗುಡ್ಡಗಾಡು ಪ್ರದೇಶದಿಂದ 20 ಶಾಸಕರು ಆಯ್ಕೆಯಾಗುತ್ತಾರೆ. ಆಡಳಿತ ಪಕ್ಷ ಮೈತೈಗಳ ಪರವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಪ್ರತ್ಯೇಕ ಆಡಳಿತ ವ್ಯವಸ್ಥೆಗೆ ಬೇಡಿಕೆ
ಚೆಂಡು ಒಕ್ಕೂಟ ಸರಕಾರದ ಗೃಹ ಸಚಿವರನ್ನು ತಲುಪಿದೆ. ‘ರಾಜ್ಯ ಸರಕಾರ ಹಿಂಸೆಗೆ ಒತ್ತಾಸೆ ನೀಡಿದೆ. ಈ ಆಡಳಿತದಡಿ ನಮ್ಮ ಉಳಿವು ಸಾಧ್ಯವಿಲ್ಲ. ಹೀಗಾಗಿ ಪ್ರತ್ಯೇಕ ಆಡಳಿತ ವ್ಯವಸ್ಥೆ ಅಗತ್ಯವಿದೆ’ ಎಂದು ಆಡಳಿತಾರೂಢ ಬಿಜೆಪಿ ಸೇರಿದಂತೆ ಚಿನ್, ಕುಕಿ, ಮಿಜೋ, ಜೋಮಿ ಮತ್ತು ಹಮರ್ ಸಮುದಾಯದ 10 ಶಾಸಕರು ದೂರು ನೀಡಿದ್ದಾರೆ. ‘ಬಜರಂಗದಳವನ್ನು ಹೋಲುವ ಆರಂಬೈ ತೆನ್ಗೊಳ್ ಸಂಘಟನೆ ಚರ್ಚ್ ಮೇಲೆ ದಾಳಿ, ಪೊಲೀಸರ ಶಸ್ತ್ರಾಸ್ತ್ರ ಲೂಟಿಯಲ್ಲಿ ಭಾಗಿಯಾಗಿದೆ. ಇನ್ನೊಂದು ಗುಂಪು ಮೈತೈ ಲೀಪನ್‌ಗೂ ಮುಖ್ಯಮಂತ್ರಿ ಆಶೀರ್ವಾದವಿದೆ’ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಎರಡು ಗುಂಪುಗಳು 2-3 ವರ್ಷಗಳಿಂದ ಇದ್ದರೂ, ಒಂದು ವರ್ಷದಿಂದೀಚೆಗೆ ಹೆಚ್ಚು ಸಕ್ರಿಯವಾಗಿವೆ. ಇದಕ್ಕೆ ಕಾರಣವೇನು ಎಂದು ತಿಳಿಯಲು ಪಾಂಡಿತ್ಯ ಬೇಕಿಲ್ಲ.

‘85 ಗ್ರಾಮಗಳಲ್ಲಿ ತಕ್ಷಣ ಸೇನೆಯನ್ನು ನಿಯೋಜಿಸಬೇಕು. ಇಲ್ಲಿ ಯಾವುದೇ ಕ್ಷಣದಲ್ಲಿ ಹಿಂಸಾಚಾರ ನಡೆಯಬಹುದು’ ಎಂದು ಮಣಿಪುರ ಆದಿವಾಸಿಗಳ ವೇದಿಕೆ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ‘ಇಂಥ ಯೋಜಿತ, ಸಂಘಟಿತ, ಶಸ್ತ್ರಾಸ್ತ್ರಸಜ್ಜಿತ ಹಲ್ಲೆ ಮತ್ತು ಗ್ರಾಮಗಳ ನೆಲಸಮ ಹಿಂದೆಂದೂ ನಡೆದಿಲ್ಲ. ಘಟನೆಯ ಕಾರಣಕರ್ತರನ್ನು ಬಂಧಿಸದೆ ಇದ್ದರೆ ಶಾಂತಿ ಸ್ಥಾಪನೆ ಸಾಧ್ಯವಾಗುವುದಿಲ್ಲ’ ಎಂದು 28 ಪುಟಗಳ ಅರ್ಜಿಯಲ್ಲಿ ವಿವರಿಸಿದೆ. ‘ಅಸ್ಸಾಮಿನ ಮಾಜಿ ಡಿಜಿಪಿ ಹರೇಕೃಷ್ಣ ದೇಖಾ ನೇತೃತ್ವದ ವಿಶೇಷ ತನಿಖಾ ತಂಡ ರಚಿಸಬೇಕು ಮತ್ತು ನಿವೃತ್ತ ಮುಖ್ಯ ನ್ಯಾಯಾಧೀಶ ಟಿನ್‌ಲಿಯಾಂಗ್‌ತಾಂಗ್ ವೈಫೈ ಅವರ ಪರಾಮರ್ಶನದಡಿ ತನಿಖೆ ನಡೆಯಬೇಕು’ ಎಂದು ಕೋರಿದೆ. ಗೃಹ ಸಚಿವರು ರಾಜ್ಯದ ಮುಖ್ಯಮಂತ್ರಿ ಜತೆ ಸಮಾಲೋಚನೆ ನಡೆಸಿದ್ದಾರೆ.

2024ರೊಳಗೆ ಈಶಾನ್ಯ ಪ್ರಾಂತದಲ್ಲಿ ಹಿಂಸೆಯ ಆವೃತ್ತವನ್ನು ಕೊನೆಗಾಣಿಸುವುದಾಗಿ ಪ್ರಧಾನಿ ಹೇಳಿದ್ದಾರೆ. ಮಾರ್ಚ್ 2023ರಲ್ಲಿ ನಡೆದ ಚುನಾವಣೆಗಳಲ್ಲಿ ಬಿಜೆಪಿ ತ್ರಿಪುರ, ನಾಗಾಲ್ಯಾಂಡ್‌ನಲ್ಲಿ ಸ್ವತಂತ್ರವಾಗಿ ಮತ್ತು ಮೇಘಾಲಯದಲ್ಲಿ(ಎನ್‌ಪಿಪಿ ಜೊತೆಗೆ) ಸರಕಾರ ರಚಿಸಿದೆ. ಆದರೆ, ಬುಡಕಟ್ಟುಗಳ ಸಂಘರ್ಷ ನಿಂತಿಲ್ಲ. ಆಫ್‌ಸ್ಪಾತೂಗುಕತ್ತಿ ನೇತಾಡುತ್ತಿದೆ. ಸಮುದಾಯಗಳ ನಡುವೆ ಅಪನಂಬಿಕೆ ಕಡಿಮೆಯಾಗಿಲ್ಲ. ಬಂಡುಕೋರರೊಂದಿಗೆ ಶಾಂತಿ ಒಪ್ಪಂದ ಆಗಿಲ್ಲ. ವಲಸೆಕೋರರ ಅನಿಯಂತ್ರಿತ ಅಕ್ರಮ ಪ್ರವೇಶದಿಂದಾಗಿ ದೇಶಿ ಸಮುದಾಯಗಳು ತಮ್ಮದೇ ನೆಲದಲ್ಲಿ ಅಲ್ಪಸಂಖ್ಯಾತರಾಗುವ ಭೀತಿ ಎದುರಿಸುತ್ತಿದ್ದಾರೆ. ರಾಜ್ಯ ಪಕ್ಷಪಾತಿ ವರ್ತನೆ ತೋರಿಸುತ್ತಿದೆ.

ಮಣಿಪುರ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಶಾಂತಿ ನೆಲೆಸಬೇಕೆಂದರೆ, ಬಂಡುಕೋರರೊಂದಿಗೆ ಮಾತುಕತೆ-ಸಂಧಾನ ಬಿಟ್ಟು ಅನ್ಯಮಾರ್ಗವಿಲ್ಲ. ಮಣಿಪುರದಲ್ಲಿ ಮೈತೈಗಳು ಪರ್ವತ ಪ್ರದೇಶದವರಿಗೆ ನ್ಯಾಯಬದ್ಧ ಪಾಲು ಸಲ್ಲಿಸಲೇಬೇಕು. ಧಾರ್ಮಿಕ ಭೇದ ಹಾಗೂ ಜನಾಂಗೀಯ ಭಿನ್ನಾಭಿಪ್ರಾಯವನ್ನು ಪ್ರಜಾಸತ್ತಾತ್ಮಕವಾಗಿ ಬಗೆಹರಿಸಬೇಕು. ಕಣಿವೆಯ ಜನರು ಮತ್ತು ಪರ್ವತ ಪ್ರದೇಶದವರ ನಡುವೆ ಅಧಿಕಾರ ಮತ್ತು ಸಂಪನ್ಮೂಲ ಹಂಚಿಕೆಯಲ್ಲಿ ಸಮಾನತೆ ಇರಬೇಕು. ಇಲ್ಲದೆ ಹೋದಲ್ಲಿ, ಈ ಪ್ರದೇಶದಲ್ಲಿ ಶಾಂತಿ ಸ್ಥಾಪನೆ ಮರೀಚಿಕೆ ಆಗುತ್ತದೆ.

ಕೊನೆಯಲ್ಲಿ: ಈಶಾನ್ಯ ರಾಜ್ಯಗಳು ಮತ್ತು ನಾಗರಿಕರು ದಿಲ್ಲಿಯಿಂದ ಬಹು ದೂರದಲ್ಲಿರುವುದರಿಂದ, ಅಧಿಕಾರಶಾಹಿಗಳ ಕಣ್ಣಿಗೆ ಕಾಣುವುದಿಲ್ಲ; ಕಿವಿಗೆ ಕೇಳುವುದಿಲ್ಲ. ಈಶಾನ್ಯ ಭಾರತೀಯರು ನಮ್ಮನಿಮ್ಮಂತೆ ಸಂವಿಧಾನ ಕೊಡಮಾಡಿದ ಎಲ್ಲ ಹಕ್ಕುಗಳನ್ನು ಹೊಂದಿದ ನಾಗರಿಕರು. ಅವರನ್ನು ‘ಚಿಂಕಿ’ ಎಂದು ಕರೆಯಬೇಡಿ.