ಅಧಿಕಾರಕ್ಕಾಗಿ ಲಿಂಗಾಯತರನ್ನು ಬಳಸಿದ ಕಾಂಗ್ರೆಸ್ ಈಗ ಮೌನವಾಗಿದೆ: ಬಿ.ವೈ ವಿಜಯೇಂದ್ರ

Update: 2023-05-19 10:16 GMT

ಬೆಂಗಳೂರು: ಅಧಿಕಾರದ ದುರಾಸೆಗೆ ಲಿಂಗಾಯತರನ್ನು ಬಳಸಿದ ಕಾಂಗ್ರೆಸ್ ನ ಪ್ರಮುಖರು ಇದೀಗ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಹುದ್ದೆ ನೀಡುವ ಸಂದರ್ಭದಲ್ಲಿ ಏಕಾಏಕಿ ಮೌನವಾಗಿದ್ದಾರೆ ಎಂದು ಶಾಸಕ, ಬಿಜೆಪಿ ನಾಯಕ ಬಿ.ವೈ ವಿಜಯೇಂದ್ರ ಟೀಕಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ವಿಪರ್ಯಾಸವೆಂದರೆ, ಕಾಂಗ್ರೆಸ್‌ನಿಂದ ಗರಿಷ್ಠ 39 ಶಾಸಕರನ್ನು ಗೆದ್ದ ನಂತರವೂ ಲಿಂಗಾಯತರಿಗೆ ಸರಿಯಾದ ಸ್ಥಾನಗಳಿಗೆ ಬೇಡಿಕೆಯ ಯಾವುದೇ ಬಲವಾದ ಧ್ವನಿಯಿಲ್ಲದಂತಾಗಿದೆ. ಕಾಂಗ್ರೆಸ್ ಪಕ್ಷದ ನಿಜವಾದ ಮುಖ ಅನಾವರಣಗೊಂಡಿದೆ. ಲಿಂಗಾಯತರನ್ನು ಯಾವತ್ತೂ ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ಕಾಂಗ್ರೆಸ್ ನಿಂದ ಸಮುದಾಯಕ್ಕೆ ನಿಜವಾದ ನ್ಯಾಯ ಕೊಡಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಅಣ್ಣ ಬಸವಣ್ಣ ಮತ್ತು ಅವರ ಬೋಧನೆಗಳನ್ನು ನಿಜವಾಗಿಯೂ ಪ್ರತಿನಿಧಿಸುವ ಬಿಜೆಪಿ, ಬಸವಣ್ಣನವರ “ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು” ತತ್ವವನ್ನು ಅನುಸರಿಸುವ ಮೂಲಕ ಎಲ್ಲರಿಗೂ ನ್ಯಾಯವನ್ನು ಒದಗಿಸುತ್ತಿದೆ. ಕರ್ನಾಟಕದ ನಾಗರಿಕರು ಕಾಂಗ್ರೆಸ್‌ ನ ಸುಳ್ಳಿಗೆ ಬೀಳುವ ತಮ್ಮ ಮೂರ್ಖತನವನ್ನು ಶೀಘ್ರದಲ್ಲೇ ಅರಿತುಕೊಳ್ಳುತ್ತಾರೆ. ಬಿಜೆಪಿ ಮತ್ತು ನರೇಂದ್ರ ಮೋದಿ ಜೀ ಜೊತೆಗೆ “ತಾಯಿ ಭಾರತಿ” ಸೇವೆಯಲ್ಲಿ ನಿಲ್ಲುವ ಮೂಲಕ ತಿದ್ದಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ ಎಂದು ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.

Similar News