ನಾಮಪತ್ರದಲ್ಲಿ ತಪ್ಪು ಮಾಹಿತಿ; ನಾಲ್ವರ ಸದಸ್ಯತ್ವವನ್ನು ಅಸಿಂಧುಗೊಳಿಸಿದ ನ್ಯಾಯಾಲಯ
ತುಮಕೂರು ಮೇ.19: ಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ತಪ್ಪು ಮಾಹಿತಿ ನೀಡಿದ್ದ ನಾಲ್ವರು ಸದಸ್ಯರ ಸದಸ್ಯತ್ವವನ್ನು ಅಸಿಂಧುಗೊಳಿಸಿರುವ ಪಾವಗಡದ ಸಿವಿಲ್ ನ್ಯಾಯಾಲಯ, ಎರಡನೇ ಅತಿ ಹೆಚ್ಚು ಮತ ಪಡೆದವರನ್ನು ಸದಸ್ಯರೆಂದು ಘೋಷಣೆ ಮಾಡಿರುವ ಅಪರೂಪದ ಘಟನೆ ಪಾವಗಡ ತಾಲೂಕು ಬ್ಯಾಡನೂರು ಬ್ಲಾಕ್ ಒಂದರಲ್ಲಿ ನಡೆದಿದೆ.
ದಿನಾಂಕ 22-12-2020 ರಂದು ನಡೆದ ಗ್ರಾಮ ಪಂಚಾಯತ್ ಚುನಾವಣೆಗೆ ನಿಗದಿಯಾಗಿದ್ದ ಸಾಮಾನ್ಯ ಪುರುಷ ಅಭ್ಯರ್ಥಿ,ಸಾಮಾನ್ಯ ಮಹಿಳಾ ಅಭ್ಯರ್ಥಿ,ಓ ಬಿ ಸಿ ಅಭ್ಯರ್ಥಿ, ಮತ್ತು ಪರಿಶಿಷ್ಟ ಪಂಗಡ ಮಹಿಳಾ ಅಭ್ಯರ್ಥಿ ಎಂಬ ನಾಲ್ಕು ಸ್ಥಾನಗಳಿಗೆ ಉಮೇದುವಾರಿಕೆ ಸಲ್ಲಿಸುವ ವೇಳೆ 08 ಆಕಾoಕ್ಷಿಗಳಲ್ಲಿ ನಿಂಗಪ್ಪ, ನಾಗಣ್ಣ, ಲಲಿತಮ್ಮ ಮತ್ತು ರತ್ನಮ್ಮ ಎಂಬ ನಾಲ್ವರು ಘೋಷಣಾ ಪ್ರಮಾಣ ಪತ್ರದಲ್ಲಿ ಸ್ಥಿರ ಸ್ವತ್ತುಗಳು ಮತ್ತು ಚರ ಸ್ವತ್ತುಗಳ ಬಗ್ಗೆ ತಪ್ಪು ಮಾಹಿತಿ ನೀಡಿ ಉಮೇದುವಾರಿಕೆ ಸಲ್ಲಿಸದ್ದನ್ನು ಆರ್ ತಿಪ್ಪೇಸ್ವಾಮಿ ಎಂಬವರು ಮಾನ್ಯ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿ ವಿಜೇತ ಅಭ್ಯರ್ಥಿಗಳ ಸದಸ್ಯತ್ವ ರದ್ದುಗೊಳಿಸಿ ಎರಡನೇ ಅಧಿಕ ಮತಗಳಿಸಿದವರನ್ನು ಆಯ್ಕೆ ಮಾಡುವಂತೆ ಕಾನೂನು ಹೋರಾಟ ಮಾಡಿದ್ದರು.
ಪ್ರಸ್ತುತ ವಿಚಾರವಾಗಿ ಸುದೀರ್ಘ ವಿಚಾರಣೆ ಮಾಡಿದ ನ್ಯಾಯಾಲಯವು ದಿನಾಂಕ 14-01-2022 ರಂದು ನಾಲ್ಕು ಸದಸ್ಯರ ಸದಸ್ಯತ್ವ ರದ್ದುಗೊಳಿಸಿತು. ಅನರ್ಹಗೊಂಡ ಸದಸ್ಯರು ಸದರಿ ಆದೇಶವನ್ನ ಪ್ರಶ್ನೆ ಮಾಡಿ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಆರ್ ತಿಪ್ಪೇಸ್ವಾಮಿಯ ವರು ಸಹ ಎರಡನೇ ಅಧಿಕ ಮತಗಳಿಸಿದವರನ್ನು ಆಯ್ಕೆ ಮಾಡುವಂತೆ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಎರಡು ಅರ್ಜಿಗಳನ್ನು ವಿಚಾರಣೆ ಮಾಡಿದ ಉಚ್ಚ ನ್ಯಾಯಾಲಯ ಕೆಳ ನ್ಯಾಯಾಲಯ ಮಾಡಿದ ಅನರ್ಹತೆ ಆದೇಶವನ್ನು ಎತ್ತಿ ಹಿಡಿದು ಅರ್ಜಿ ವಜಾಗೊಳಿಸಿತು. ಅರ್ಜಿದಾರ ಆರ್ ತಿಪ್ಪೇಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ಎರಡನೇ ಅಧಿಕ ಮತ ಗಳಿಸಿದ ಸದಸ್ಯರನ್ನ ಪರಿಗಣಿಸುವಂತೆ ಮರು ವಿಚಾರಣೆ ಮಾಡುವಂತೆ ಮಾನ್ಯ ಹಿರಿಯ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು. ಸದರಿ ವಿಚಾರವಾಗಿ ಪಾವಗಡ ಹಿರಿಯ ಸಿವಿಲ್ ನ್ಯಾಯಾಲಯ ಕೈಗೆತ್ತಿಕೊಂಡು ದಿನಾಂಕ 30-01-2023 ರಂದು ಎರಡನೇ ಅಧಿಕ ಮತಗಳಿಸಿದ ಆರ್ ತಿಪ್ಪೇಸ್ವಾಮಿ (ಸಾಮಾನ್ಯ ಪುರುಷ ಅಭ್ಯರ್ಥಿ), ಸಾವಿತ್ರಮ್ಮ (ಸಾಮಾನ್ಯ ಮಹಿಳಾ ಅಭ್ಯರ್ಥಿ), ಬಾಬಾ ಫಕ್ರುದ್ಧಿನ್ ( ಓ ಬಿ ಸಿ ಅಭ್ಯರ್ಥಿ) ಮತ್ತು ಸರೋಜಮ್ಮ ( ಪರಿಶಿಷ್ಟ ಪಂಗಡ ಮಹಿಳಾ ಅಭ್ಯರ್ಥಿ) ಇವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿತು.
ಸದರಿ ಆದೇಶ ಜಾರಿ ಮಾಡುವಂತೆ ಚುನಾವಣೆ ಆಯೋಗ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದು ಮಾನ್ಯ ಜಿಲ್ಲಾಧಿಕಾರಿ ಆದೇಶದಂತೆ ಪಾವಗಡ ತಹಸೀಲ್ದಾರ್ ರವರು ನ್ಯಾಯಾಲಯ ಆದೇಶ ಜಾರಿ ಮಾಡಿ ಎರಡನೇ ಅಧಿಕ ಮತಗಳಿಸಿದ ನಾಲ್ಕು ಸದಸ್ಯರಿಗೆ 30-03-2023 ರಂದು ಚುನಾವಣಾ ಪ್ರಮಾಣ ಪತ್ರ ವಿತರಣೆ ಮಾಡಿದ್ದಾರೆ.