×
Ad

ಸಕಲೇಶಪುರ: ಜನರ ನಿದ್ದೆಗೆಡಿಸಿದ್ದ ಕಾಡಾನೆ ಸೆರೆ

Update: 2023-05-19 19:18 IST

ಹಾಸನ: ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ್ದ 'ಆಪರೇಷನ್ ಓಲ್ಡ್ ಮಕ್ನಾ' ಯಶಸ್ವಿಯಾಗಿದ್ದು, ಸತತ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ಸ್ಥಳೀಯರ ನಿದ್ದೆ ಕೆಡಿಸಿದ್ದ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ.

ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಸಮೀಪದ ಒನ್ನೂರು ಎಸ್ಟೇಟ್ ನ ಮಠಸಾಗರ ಬಳಿ ಕಾಡಾನೆ ಸೆರೆ ಸಿಕ್ಕಿದೆ. ಅಹಾರಕ್ಕಾಗಿ ಮನೆಗಳ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿಮಾಡಿದ್ದ ಪುಂಡಾನೆ, ಪ್ರಾಣ ಹಾನಿ ಮಾಡದೇ ಇದ್ದರೂ, ಅನೇಕರಲ್ಲಿ ಜೀವ ಭಯ ಉಂಟು ಮಾಡಿತ್ತು.

ನಿತ್ಯ ಉಪಟಳ ನೀಡುತ್ತಿದ್ದ ಕಾರಣದಿಂದ 2022 ರ ಜೂನ್ 29 ರಂದು ಇದೇ ಆನೆಯನ್ನು ಸೆರೆ ಹಿಡಿದು ದೂರದ ಬಂಡೀಪುರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಆದರೆ ಕೇವಲ ಒಂದೇ ತಿಂಗಳ ಅಂತರದಲ್ಲಿ ನೂರಾರು ಕಿಲೋ ಮೀಟರ್ ಕ್ರಮಿಸಿ ಇದೇ ಆನೆ ಮಲೆನಾಡಿಗೆ ವಾಪಸ್ ಬಂತಿತ್ತು.  ಆಹಾರಕ್ಕಾಗಿ ಮನೆಗಳಿಗೆ ನುಗ್ಗುವುದು, ಹೊಟ್ಟೆಗೆ ಊಟ ಸಿಗದೇ ಇದ್ದಾಗ ಹಾನಿ ಮಾಡುವುದು, ನ್ಯಾಯಬೆಲೆ ಅಂಗಡಿಗೆ ನುಗ್ಗಿ ಅಕ್ಕಿ ಹಾಳು ಮಾಡುವುದನ್ನು ಮುಂದುವರಿಸಿತ್ತು.

ಇದರಿಂದ ಆತಂಕಗೊಂಡಿದ್ದ ಜನರು ಕೂಡಲೇ ಸದರಿ ಆನೆಯನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡದಂತೆ ಒತ್ತಡ ಹೇರಿದ್ದರು. ಅದರಂತೆ ಡಿಸಿಎಫ್ ಹರೀಶ್ ನೇತೃತ್ವದಲ್ಲಿ ನಿನ್ನೆಯೇ ಕಾರ್ಯಾಚರಣೆ ನಡೆಸಬೇಕಿತ್ತು. ಆದರೆ ಆನೆ ಶಿಬಿರಗಳಿಂದ ಪಳಗಿದ ಆನೆಗಳು ಬರುವುದು ವಿಳಂಬವಾದ ಕಾರಣ, ಇಂದು ಬೆಳಗ್ಗೆ ಮಕ್ನ ಎಲಿಫೆಂಟ್ ಆಪರೇಷನ್ ಶುರುವಾಗಿ, ಕೆಲವೇ ಗಂಟೆಗಳಲ್ಲಿ ಯಶಸ್ವಿಯಾಗಿದೆ. 

ಸಾಕಾನೆ ಅಭಿಮನ್ಯು ನೇತೃತ್ವದಲ್ಲಿ ಐದು ಸಾಕಾನೆಗಳಿಂದ ಕಾರ್ಯಾಚರಣೆ ನಡೆಯಿತು.
 

Similar News