ಚಾಮರಾಜನಗರ | ಅಂಬೇಡ್ಕರ್​ಗೆ ಅವಮಾನ ಆರೋಪ; ಮೆಡಿಕಲ್ ಕಾಲೇಜು ಡೀನ್​ ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ

Update: 2023-05-19 14:25 GMT

ಚಾಮರಾಜನಗರ: ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ಸಿಮ್ಸ್) ಡೀನ್ ಮತ್ತು ನಿರ್ದೇಶಕ ಡಾ.ಜಿ.ಎಂ.ಸಂಜೀವ್ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಆಸ್ಪತ್ರೆಯ ಹೊರಗುತ್ತಿಗೆಯ ಕೆಲವು ನೌಕರರು, ದಲಿತ ಸಂಘಟನೆಗಳ ಕಾರ್ಯಕರ್ತರು ಡೀನ್ ಕಾರನ್ನು ಅಡ್ಡಕಟ್ಟಿ, ಕಾರಿಗೆ ಕಲ್ಲೆಸೆದು ಅವರ ಮೇಲೆ ಕೊಳಚೆ ನೀರು ಎಸೆದು ಆಕ್ರೋಶ ವ್ಯಕ್ತ ಪಡಿಸಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಪೊಲೀಸರು ಮಧ್ಯಪ್ರವೇಶಿಸಿ ಆಕ್ರೋಶ ಭರಿತ ಯುವಕರಿಂದ ಡಾ.ಸಂಜೀವ್ ಅವರನ್ನು ರಕ್ಷಣೆ ಮಾಡಿದ್ದು, ಗ್ರಾಮೀಣ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಬಹುಜನ ಸಮಾಜ ಪಕ್ಷದ ಮುಖಂಡರು ಡೀನ್ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ.

ಘಟನೆ ವಿವರ: ಸಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರಿಗೆ ವೇತನ ಆಗದಿರುವ ಬಗ್ಗೆ ಗುರುವಾರ ಸಿಮ್ಸ್ ಆವರಣದಲ್ಲಿ ನೌಕರರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಡೀನ್ ಮತ್ತು ನೌಕರರ ನಡುವೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ವಾಗ್ವಾದದ ಸಂದರ್ಭದಲ್ಲಿ ಡೀನ್ ತಮ್ಮನ್ನು ತಳ್ಳಿ ಗಾಯಗೊಳಿಸಿದ್ದಾರೆ ಎಂದು ಕಾವಲುಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಿ.ಮಹದೇವ ಆರೋಪಿಸಿದ್ದಾರೆ.

ಈ ವಿಚಾರವಾಗಿ ಸಿಮ್ಸ್ ನ ಮೂಳೆ ಮತ್ತು ಕೀಲು ವಿಭಾಗದ ಮುಖ್ಯಸ್ಥ ಡಾ.ಸಿ.ವಿ.ಮಾರುತಿ ಮುಖ್ಯ ಆಡಳಿತಾಧಿಕಾರಿ ಮಂಜುನಾಥ್ ಇತರರು ವಿಚಾರಿಸಿದಾಗ ಡಾ.ಸಂಜೀವ್ ಅವರು ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ, ಡಾ.ಸಿ.ವಿ.ಮಾರುತಿ ಶುಕ್ರವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರನ್ನು ಭೇಟಿ‌ ಮಾಡಿ ಲಿಖಿತವಾಗಿ ದೂರು‌ ನೀಡಿದ್ದರು. ಈ ವಿಚಾರ ಸಂಘಟನೆಗಳ ಪ್ರತಿನಿಧಿಗಳು ಹಾಗೂ ನೌಕರರಿಗೆ ಗೊತ್ತಾದ ನಂತರ ಯಡಬೆಟ್ಟದಲ್ಲಿರುವ ಸಿಮ್ಸ್ ಗೆ ತೆರಳಿ, ಡೀನ್ ಅವರು ಪತ್ನಿ ಜೊತೆ ಕಾರಲ್ಲಿ ಹೊರ ಬರುತ್ತಿದ್ದಾಗ, ಅಡ್ಡಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Similar News