ಅಪಘಾತ ಪರಿಹಾರ: ಎಂಎಸಿಟಿ ಆದೇಶ ಎತ್ತಿಹಿಡಿದ ಹೈಕೋರ್ಟ್
ಬೆಂಗಳೂರು, ಮೇ 19: ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಬೈಕ್‍ನಲ್ಲಿ ಟ್ರಿಪಲ್ ರೈಡ್ ಹೋಗುತ್ತಿದ್ದ ಸಂದರ್ಭದಲ್ಲಿ ಕಾರ್‍ಗೆ ಢಿಕ್ಕಿ ಹೊಡೆದಾಗ ಬೈಕ್ ಸವಾರರ ಮೇಲೆ ಶೇ.50 ನಿರ್ಲಕ್ಷ್ಯದ ಹೊಣೆ ಹೊರಿಸಿದ್ದ ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣದ (ಎಂಎಸಿಟಿ) ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ನಿರ್ಲಕ್ಷ್ಯದ ಹೊಣೆಯನ್ನು ತಮ್ಮ ಮೇಲೆ ಹೊರಿಸಿದ್ದ ಎಂಎಸಿಟಿ ಆದೇಶ ರದ್ದುಪಡಿಸಿ, ಪರಿಹಾರದ ಮೊತ್ತ ಹೆಚ್ಚಿಸಬೇಕು ಎಂದು ಕೋರಿ ಮೂವರು ಬೈಕ್ ಸವಾರರು ಹಾಗೂ ಸಂಪೂರ್ಣ ನಿರ್ಲಕ್ಷ್ಯದ ಹೊಣೆಯನ್ನು ಬೈಕ್ ಸವಾರರ ಮೇಲೆಯೇ ಹೊರಿಸಬೇಕೆಂದು ಕಾರ್ ನ ವಿಮಾ ಕಂಪೆನಿ ಸಲ್ಲಿಸಿದ್ದ ಪ್ರತ್ಯೇಕ ಮೇಲ್ಮನವಿಗಳನ್ನು ವಜಾಗೊಳಿಸಿರುವ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ಮಾಡಿದೆ.
ಪ್ರಕರಣದಲ್ಲಿ ಬೈಕ್ ಸವಾರರು ಹಾಗೂ ಕಾರು ಚಾಲಕ ಪರಸ್ಪರ ದೂರುಗಳನ್ನು ದಾಖಲಿಸಿದ್ದು, ಕಾರು ಚಾಲಕ ದಾಖಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ. ಮೋಟಾರ್ ಸೈಕಲ್ ಸವಾರರು ದಾಖಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಬಿ ವರದಿ ಸಲ್ಲಿಸಲಾಗಿದೆ.
ಹೀಗಿರುವಾಗ, ಬೈಕ್ ಸವಾರರ ನಿರ್ಲಕ್ಷ್ಯ ಸಾಬೀತುಪಡಿಸಬೇಕೆಂದರೆ, ಕಾರು ಚಾಲಕನನ್ನು ವಿಚಾರಣೆಗೆ ಒಳಪಡಿಸಬೇಕಾಗುತ್ತದೆ. ಆದರೆ, ಕಾರು ಚಾಲಕ ನ್ಯಾಯಾಧೀಕರಣ ವಿಚಾರಣೆಯಿಂದ ದೂರ ಉಳಿದಿದ್ದಾರೆ. ಇದರಿಂದ, ಅಪಘಾತಕ್ಕೆ ಯಾರು ಹೊಣೆ ಎಂಬುದನ್ನು ನಿರ್ಧರಿಸಲು ಸಾಧ್ಯವಾಗಬಹುದಾದ ಉತ್ತಮ ಸಾಕ್ಷಿಯೊಂದು ನ್ಯಾಯಾಧಿಕರಣಕ್ಕೆ ಅಲಭ್ಯವಾದಂತಾಗಿದೆ.
ಹೀಗಾಗಿ, ಕಾರಿನ ಮಾಲಕ ಹಾಗೂ ಬೈಕ್ ಸವಾರರನ್ನು ಸಮಾನ ಹೊಣೆಗಾರರನ್ನಾಗಿಸಿರುವ ಎಂಎಸಿಟಿ ಕ್ರಮ ಸೂಕ್ತವಾಗಿದೆ. ಪರಿಹಾರದ ಮೊತ್ತದಲ್ಲಿ ಶೇ.50 ಕಡಿತಗೊಳಿಸಿ ಉಳಿದ ಮೊತ್ತವನ್ನು ಗಾಯಾಳುಗಳಿಗೆ ಪಾವತಿಸುವಂತೆ ನ್ಯಾಯಾಧಿಕರಣ ಹೊರಡಿಸಿರುವ ಆದೇಶ ಸೂಕ್ತವಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸುವ ಅವಶ್ಯಕತೆ ಕಂಡುಬರುತ್ತಿಲ್ಲ ಎಂದು ತಿಳಿಸಿರುವ ಹೈಕೋರ್ಟ್, ಎಲ್ಲ ಮೇಲ್ಮನವಿಗಳನ್ನೂ ವಜಾಗೊಳಿಸಿದೆ.