ಅಧಿಕಾರಕ್ಕಾಗಿ ನನ್ನ, ಸಿದ್ದರಾಮಯ್ಯರ ಮನೆ ಸುತ್ತಬೇಡಿ: ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಡಿಕೆಶಿ ಸೂಚನೆ

"ನಾವು ಅಧಿಕಾರವನ್ನು ಸಮಾನವಾಗಿ ಹಂಚಿಕೆ ಮಾಡುತ್ತೇವೆ"

Update: 2023-05-21 14:41 GMT

ಬೆಂಗಳೂರು: ‘ನಾವು ಅಧಿಕಾರವನ್ನು ಸಮಾನವಾಗಿ ಹಂಚಿಕೆ ಮಾಡುತ್ತೇವೆ. ಯಾರೂ ಅಧಿಕಾರಕ್ಕಾಗಿ ನನ್ನ ಮತ್ತು ಸಿದ್ದರಾಮಯ್ಯ ಅವರ ಮನೆ ಸುತ್ತಬೇಡಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಸೂಚನೆ ನೀಡಿದ್ದಾರೆ.

ರವಿವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಕಾಂಗ್ರೆಸ್‍ನ ಕಾರ್ಯಕರ್ತರಲ್ಲಿ ನಾಯಕತ್ವ ಬೆಳೆಸಬೇಕಿದೆ. ನೀವೆಲ್ಲರೂ ನಿಮ್ಮ ನಾಯಕತ್ವವನ್ನು ನಮ್ಮ ಮುಂದೆ ತೋರಿಸುವುದಲ್ಲ. ಸ್ಥಳೀಯ ಮಟ್ಟದಲ್ಲಿ ತೋರಿಸಿ ಪಕ್ಷ ಸಂಘಟಿಸಿ’ ಎಂದು ಸಚಿವಾಕಾಂಕ್ಷಿಗಳಿಗೆ ಕಿವಿಮಾತು ಹೇಳಿದರು.

‘ನಾನು ಯಾವುದೇ ಆಕಾಂಕ್ಷಿಗಳ ಒತ್ತಾಯಕ್ಕೆ ಮಣಿಯುವವನಲ್ಲ. ನನಗೆ ಮಂತ್ರಿಯಾಗಿ 30 ವರ್ಷಗಳ ಅನುಭವವಿದೆ. ಎಲ್ಲವನ್ನೂ ನನ್ನದೇ ಆದ ವಿಚಾರಗಳಲ್ಲಿ ತೀರ್ಮಾನಿಸುತ್ತೇನೆ. ಮೊದಲು ನೀವು ಬೂತ್ ಮಟ್ಟದಲ್ಲಿ ಬಲಿಷ್ಠರಾಗಿ, ಮುಂದಿನ ಲೋಕಸಭಾ ಚುನಾವಣೆ ನಿಮ್ಮ ಗುರಿಯಾಗಬೇಕು’ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

‘ನಾನು ಬಂಗಾರಪ್ಪನವರ ಶಿಷ್ಯ, ಎಸ್.ಎಂ.ಕೃಷ್ಣ ಅವರ ಶಿಷ್ಯನಲ್ಲ. ಬಂಗಾರಪ್ಪನವರ ಜೊತೆ ರಾಜಕಾರಣ ಶುರು ಮಾಡಿದವನು. ಎಲ್ಲರೂ ವೀರೇಂದ್ರ ಪಾಟೀಲ್‍ರನ್ನು ಇಳಿಸಿದರು, ಹಾಗೆ ಹೀಗೆ ಅಂತಾರೆ. ಆದರೆ ಅಂದು ಅವರ ಆರೋಗ್ಯ ಸ್ಥಿತಿ ಹಾಗಿತ್ತು. ಆದುದರಿಂದ ತೀರ್ಮಾನ ಕೈಗೊಂಡರು. ವೀರೇಂದ್ರ ಪಾಟೀಲ್ ಅವರೇ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗಿದ್ದೆವು. ಗೆದ್ದಾಗ ಅವರೇ ಸಿಎಂ ಆಗಿದ್ದರು ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Similar News