ತುಮಕೂರು: ಕಾಂಗ್ರೆಸ್ ಕೊಡುಗೆಗಳ ಬಗ್ಗೆ ಫೇಸ್‌ಬುಕ್‌ನಲ್ಲಿ ಟೀಕಿಸಿದ ಶಿಕ್ಷಕ ಅಮಾನತು
ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಯೋಜನೆಗಳ ಬಗ್ಗೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಟೀಕಿಸಿದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರೊಬ್ಬರನ್ನು ಭಾನುವಾರ ಅಮಾನತುಗೊಳಿಸಲಾಗಿದೆ. ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜ್ಯದ ಸಾಲ ಹೊರೆ ಹೆಚ್ಚಿದ್ದರಿಂದ ಇಷ್ಟೊಂದು ಕೊಡುಗೆಗಳನ್ನು ಕೊಡುವುದು ಸಾಧ್ಯವಾಗಿದೆ ಎಂದು ಇವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದರು.
"ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಅಧಿಕಾರಾವಧಿಯಲ್ಲಿ ಸಾಲದ ಹೊರೆ 3,590 ಕೋಟಿ ರೂಪಾಯಿ, ಧರ್ಮಸಿಂಗ್ ಅವಧಿಯಲ್ಲಿ 15,635 ಕೋಟಿ, ಎಚ್.ಡಿ.ಕುಮಾರಸ್ವಾಮಿ ಅವಧಿಯಲ್ಲಿ 3545 ಕೋಟಿ, ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ 25,653 ಕೋಟಿ, ಡಿ.ವಿ.ಸದಾನಂದ ಗೌಡ ಅವರ ಅವಧಿಯಲ್ಲಿ 9464 ಕೋಟಿ, ಜಗದೀಶ್ ಶೆಟ್ಟರ್ ಅವಧಿಯಲ್ಲಿ 13464 ಕೋಟಿ ಹಾಗೂ ಸಿದ್ದರಾಮಯ್ಯ ಅವಧಿಯಲ್ಲಿ 2,42,000 ಕೋಟಿ ಸಾಲದ ಹೊರೆ ಬಿದ್ದಿದೆ: ಎಂದು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಶಿಕ್ಷಕ ಸತ್ಯಮೂರ್ತಿ ಎಂ.ಜಿ. ಎಂಬುವವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದರು.
ಕೃಷ್ಣ ಅವರ ಅಧಿಕಾರಾವಧಿಯಿಂದ ಶೆಟ್ಟರ್ ಅಧಿಕಾರಾವಧಿವರೆಗೆ ಸಾಲದ ಹೊರೆ 71,331 ಕೋಟಿ ರೂಪಾಯಿ ಆದರೆ, ಸಿದ್ದರಾಮಯ್ಯ ಅವಧಿಯಲ್ಲಿ (2013-18) 2.42 ಲಕ್ಷ ಕೋಟಿಗೆ ಏರಿದೆ. ಆದ್ದರಿಂದ ಉಚಿತ ಕೊಡುಗೆಗಳನ್ನು ಘೋಷಿಸುವುದು ಸಾಧ್ಯವಾಗಿದೆ ಎಂದು ವಿವರಿಸಿದ್ದರು.
ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಾವಳಿ-1966ನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಇವರ ವಿರುದ್ಧ ಇಲಾಖಾ ವಿಚಾರಣೆಗೂ ಆದೇಶಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.