ತರೀಕೆರೆ: ಭದ್ರಾ ಕಾಲುವೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಮೃತ್ಯು

Update: 2023-05-22 18:12 GMT

ಚಿಕ್ಕಮಗಳೂರು, ಮೇ 22:ನೀರಿನಲ್ಲಿ ಆಟವಾಡಲು ಹೋಗಿದ್ದ ವೇಳೆ ಆಯತಪ್ಪಿ ನೀರಿಗೆ ಬಿದ್ದ ಬಾಲಕಿಯ ರಕ್ಷಣೆ ಮಾಡಲು ಹೋಗಿದ್ದ ಬಾಲಕಿಯ ಇಬ್ಬರು ಸಂಬಂಧಿಗಳೂ ಸೇರಿದಂತೆ ಒಂದೇ ಕುಟುಂಬದ ಮೂರು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಪಟ್ಟಣ ಸಮೀಪದ ಭದ್ರಾ ಕಾಲುವೆಯಲ್ಲಿ ಸೋಮವಾರ ವರದಿಯಾಗಿದೆ.

ಲಕ್ಕವಳ್ಳಿ ಪಟ್ಟಣದ ನಿವಾಸಿ ರವಿ(31), ಶಿವಮೊಗ್ಗ ನಗರದ ನಿವಾಸಿ ಅನನ್ಯಾ(17) ಹಾಗೂ ನಂಜನಗೂಡಿನ ಶಾಮವೇಣಿ(16) ಮೃತಪಟ್ಟವರು.

ಅನನ್ಯಾ ಹಾಗೂ ಶಾಮವೇಣಿ ಲಕ್ಕವಳ್ಳಿಯಲ್ಲಿರುವ ರವಿಯ ಸಹೋದರಿಯರ ಮಕ್ಕಳಾಗಿದ್ದು, ಇವರು ಇತ್ತೀಚೆಗೆ ಲಕ್ಕವಳ್ಳಿಯಲ್ಲಿರುವ ರವಿ ಮನೆಗೆ ಬಂದಿದ್ದರು. ಸೋಮವಾರ ಬೆಳಗ್ಗೆ ರವಿ, ಅನನ್ಯಾ, ಶಾಮವೇಣಿ ಭದ್ರಾ ಡ್ಯಾಮ್‌ನ ಕಾಲುವೆ ಬಳಿ ಹೋಗಿದ್ದರು. ಈ ವೇಳೆ ಅನನ್ಯಾ ಹಾಗೂ ಶಾಮವೇಣಿ ಕಾಲುವೆ ಬದಿಯಲ್ಲಿ ನೀರಿಗಿಳಿದು ಆಟವಾಡುತ್ತಿದ್ದ ವೇಳೆ ಶಾಮವೇಣಿ ಆಯತಪ್ಪಿ ಕಾಲುವೆಗೆ ಬಿದ್ದಿದ್ದಾಳೆ. ಇದನ್ನು ಕಂಡ ಅನನ್ಯಾ ಶಾಮವೇಣಿಯ ನೆರವಿಗೆ ಹೋದಾಗ ಆಕೆಯೂ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದ್ದಾಳೆ. ಈ ವೇಳೆ ದಡದಲ್ಲಿದ್ದ ರವಿ, ನೀರಿನಲ್ಲಿ ಮುಳುಗುತ್ತಿದ್ದ ಅನನ್ಯಾ ಹಾಗೂ ಶಾಮವೇಣಿಯನ್ನು ರಕ್ಷಣೆ ಮಾಡಲು ಕಾಲುವೆಗೆ ಇಳಿದಿದ್ದಾರೆ. ಆದರೆ, ಕಾಲುವೆಯಲ್ಲಿ ಹರಿಯುತ್ತಿದ್ದ ನೀರಿನ ಸೆಳೆತಕ್ಕೆ ಸಿಲುಕಿದ ಮೂವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಕ್ಕವಳ್ಳಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕಾಲುವೆಯಲ್ಲಿ ಕೊಚ್ಚಿ ಹೋದವರ ಪತ್ತೆಗೆ ಶೋಧ ಆರಂಭಿಸಿದ್ದಾರೆ. ಈ ವೇಳೆ ಅನನ್ಯಾಳ ಮೃತದೇಹ ಪತ್ತೆಯಾಗಿದ್ದು, ರವಿ ಹಾಗೂ ಶಾಮವೇಣಿಯ ಮೃತದೇಹಕ್ಕಾಗಿ ಶೋಧ ಮುಂದುವರಿದಿದೆ. ರವಿ ವಿವಾಹಿತರಾಗಿದ್ದು, ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿದರು. ಘಟನೆ ಸಂಬಂಧ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News