VIDEO | ಮತದಾರರಿಗೆ ನೀಡದೇ ಇಟ್ಟುಕೊಂಡ ನನ್ನ ಹಣ ವಾಪಸ್ ಕೊಡಿ: ಮಾಜಿ ಸಚಿವ ಕೆ.ಸಿ ನಾರಾಯಣಗೌಡ
ಮಂಡ್ಯ, ಮೇ 22: ಕಾರ್ಯಕರ್ತರ ಖರ್ಚಿಗೆ ನೀಡಿದ್ದ ಹಣವನ್ನು ವಿತರಸದೇ ಇಟ್ಟುಕೊಂಡಿರುವ ಮುಖಂಡರು ಹಿಂತಿರುಗಿಸುವಂತೆ ಕೆ.ಆರ್.ಪೇಟೆಯಲ್ಲಿ ಸೋಲುಂಡಿರುವ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮನವಿ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಕೆ.ಆರ್.ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆಯಲ್ಲಿ ನಾರಾಯಣಗೌಡ ಅವರು ಈ ವಿಷಯವನ್ನು ಪ್ರಸ್ತಾಪಿಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಧಾನಸಭಾ ಚುನಾವಣೆಯಲ್ಲಿ ನಾನು ಕಾರ್ಯಕರ್ತರ ಖರ್ಚಿಗಾಗಿ ನೀಡಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಮುಖಂಡರು ಕಾರ್ಯಕರ್ತರಿಗೆ ವಿತರಿಸದೇ ತಮ್ಮ ಬಳಿಯೇ ಇಟ್ಟುಕೊಂಡಿರುವ ಬಗ್ಗೆ ನನಗೆ ಕಾರ್ಯಕರ್ತರಿಂದ ವ್ಯಾಪಕವಾಗಿ ದೂರುಗಳು ಬಂದಿವೆ. ದಯಮಾಡಿ ತಂದು ಕೊಟ್ಟುಬಿಡಿ ಎಂದು ನಾರಾಯಣಗೌಡ ಮನವಿ ಮಾಡಿದ್ದಾರೆ.
ಬಿಜೆಪಿ ಪಕ್ಷದ ಸಂಘಟನೆಗಾಗಿ ತಂದಿದ್ದ ಹಣವನ್ನು ದುರುಪಯೋಗಪಡಿಸಿಕೊಳ್ಳುವುದು ಬೇಡ. ಯಾರು ಹಣವನ್ನು ವಿತರಣೆ ಮಾಡಿಲ್ಲವೋ ಹಿಂತಿರುಗಿಸಿ ಬಿಡಿ. ಆದರೆ, ಆ ಹಣ ನನಗೆ ಬೇಡ. ಟ್ರಸ್ಟ್ ಮಾಡಿಕೊಂಡು ಪಕ್ಷ ಸಂಘಟನೆಗೆ ಬಳಸಿಕೊಳ್ಳೋಣ ಎಂದು ಅವರು ಕೋರಿದ್ದಾರೆ.