×
Ad

ಮುರುಘಾ ಮಠದ ಆಡಳಿತಾಧಿಕಾರಿ ನೇಮಕ ರದ್ದುಪಡಿಸಿದ ಹೈಕೋರ್ಟ್

Update: 2023-05-22 17:44 IST

ಬೆಂಗಳೂರು, ಮೇ 22: ಚಿತ್ರದುರ್ಗ ಮುರುಘಾಮಠಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಸೋಮವಾರ ರದ್ದುಪಡಿಸಿ ಆದೇಶಿಸಿದೆ. 

ಚಿತ್ರದುರ್ಗದ ಡಿ.ಎಸ್.ಮಲ್ಲಿಕಾರ್ಜುನ ಸೇರಿದಂತೆ ಮತ್ತಿತರರು ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ಪ್ರಕಟಿಸಿದೆ. ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವುದಕ್ಕೆ ಸರಕಾರಕ್ಕೆ ಅಧಿಕಾರವಿಲ್ಲ. ಮಠ ಮತ್ತು ಮಠದಲ್ಲಿ ಶೈಕ್ಷಣಿಕ ಆಡಳಿತವನ್ನು ನಿರ್ವಹಣೆ ಮಾಡುವುದಕ್ಕಾಗಿ ಮಠದ ಭಕ್ತರು ವೀರಶೈವ ಲಿಂಗಾಯತ ಸಮುದಾಯದ ಪ್ರಮುಖ ಮುಖಂಡರು ಸೂಕ್ತ ನಿರ್ಧಾರವನ್ನು ಕೈಗೊಳ್ಳಬಹುದು. ಹೀಗಾಗಿ ಮಠಕ್ಕೆ ಸರಕಾರ ನೇಮಕ ಮಾಡಿರುವ ಆಡಳಿತಾಧಿಕಾರಿ ಮುಂದಿನ ನಾಲ್ಕು ವಾರಗಳ ಕಾಲ ಮುಂದುವರೆಯಬಹುದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣ ಸಂಬಂಧ ಈ ಹಿಂದೆ ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು, ಸರಕಾರ ಸಂವಿಧಾನದ 162ನೆ ವಿಧಿಯಡಿ ಆಡಳಿತಾಧಿಕಾರಿ ನೇಮಕ ಮಾಡಿರುವುದು ಕಾನೂನು ಬಾಹಿರ. ಮಠಗಳ ಮೇಲೆ ನಿಯಂತ್ರಣ ಹೊಂದಲು ಕಾನೂನಿನಡಿ ಅವಕಾಶವಿಲ್ಲ. ಹೀಗಾಗಿ, ಈ ಪ್ರಕರಣದಲ್ಲಿ ಸರಕಾರ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು ಎಂದು ಪೀಠಕ್ಕೆ ಕೋರಿದ್ದರು.

ಸರಕಾರದ ಪರವಾಗಿ ವಾದ ಮಂಡಿಸಿದ್ದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಮುರುಘಾ ಮಠದ ಪೀಠಾಧಿಪತಿಗಳು, ಪೊಕ್ಸೊ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಜೈಲಿನಿಂದಲೇ ಮಠ ಮತ್ತು ವಿದ್ಯಾಸಂಸ್ಥೆಗಳ ಆಡಳಿತ ನಡೆಸುವುದಾದರೆ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿಗೆ ಭಾರಿ ಹಾನಿಯುಂಟಾಗಲಿದೆ ಎಂದು ತಿಳಿಸಿದ್ದರು.

ಅಲ್ಲದೆ, ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವುದರಿಂದ ದೈನಂದಿನ ಪೂಜಾ ಕೈಂಕರ್ಯ, ದಾಸೋಹ ಹಾಗೂ ಇತರೆ ಚಟುವಟಿಕೆಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಕೋರಿದ್ದರು.
 

Similar News