×
Ad

ಮಾಹಿತಿ ನೀಡದ ಆರೋಪ: ಕಸಾಪ ಅಧ್ಯಕ್ಷ ಮಹೇಶ್ ಜೋಶಿಗೆ ದಂಡ ಆದೇಶಕ್ಕೆ ಹೈಕೋರ್ಟ್ ತಡೆ

Update: 2023-05-23 23:06 IST

ಬೆಂಗಳೂರು, ಮೇ 23: ಬೆಂಗಳೂರಿನ ದೂರದರ್ಶನದ ಮುಖ್ಯಸ್ಥರಾಗಿದ್ದ ವೇಳೆ ಮಾಹಿತಿ ಹಕ್ಕು ಕಾಯಿದೆ(ಆರ್‍ಟಿಐ) ಅಡಿ ಮಾಹಿತಿ ನೀಡಲು ನಿರಾಕರಿಸಿದ್ದ ಹಳೆಯ ಪ್ರಕರಣದಲ್ಲಿ ಹಾಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ಅವರಿಗೆ 25 ಸಾವಿರ ರೂ.ದಂಡ ವಿಧಿಸಿದ್ದ ಏಕಸದಸ್ಯ ಪೀಠದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‍ನ ದ್ವಿಸದಸ್ಯ ಪೀಠ ತಡೆ ನೀಡಿದೆ.

ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮಹೇಶ್ ಜೋಶಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಚ್.ಟಿ.ನರೇಂದ್ರ ಪ್ರಸಾದ್ ಮತ್ತು ಎಸ್.ರಾಚಯ್ಯ ಅವರಿದ್ದ ನಾಯಪೀಠವು ವಿಚಾರಣೆ ನಡೆಸಿತು. ಮುಂದಿನ ವಿಚಾರಣೆವರೆಗೂ ಏಕಸದಸ್ಯ ಪೀಠಕ್ಕೆ ತಡೆ ನೀಡಿ ಆದೇಶಿಸಿದೆ. 

ಎಸ್.ಭಜಂತ್ರಿ ಎಂಬುವರು ಮಾಹಿತಿ ಹಕ್ಕಿನಡಿ ಕೋರಿದ್ದ ಮಾಹಿತಿಯನ್ನು ನೀಡಲು ದೂರದರ್ಶನದ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿ(ಪಿಐಒ) ಮಹೇಶ್ ಜೋಶಿ ಅವರು ನಿರಾಕರಿಸಿದ್ದರು. ಹೀಗಾಗಿ, ಅವರು ಎರಡನೆ ಮೇಲ್ಮನವಿ ಪ್ರಾಧಿಕಾರದ ಮೊರೆ ಹೋಗಿದ್ದರು. 

ಆ ಪ್ರಾಧಿಕಾರವು ಅರ್ಜಿದಾರರಿಗೆ ಮಾಹಿತಿ ನೀಡುವಂತೆ ಆದೇಶಿಸಿತ್ತು. ಅದರೆ ಮೇಲ್ಮನವಿ ಪ್ರಾಧಿಕಾರದ ಆದೇಶವನ್ನು ಪ್ರಶ್ನಿಸಿ ಜೋಶಿ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠವು ಮಾಹಿತಿ ಹಕ್ಕು ಕಾಯಿದೆ ಅಡಿ ಪಿಐಒಗೆ ಮೇಲ್ಮನವಿ ಸಲ್ಲಿಸುವ ಅಧಿಕಾರವಿಲ್ಲ ಎಂದು ಆದೇಶಿಸಿತ್ತಲ್ಲದೇ ಅರ್ಜಿ ವಜಾಗೊಳಿಸಿ 25 ಸಾವಿರ ರೂಪಾಯಿ ದಂಡ ವಿಧಿಸಿತ್ತು.

Similar News