ನನ್ನ ಮಗ ಏನು ಓದಿದ್ದಾನೆ ಎಂಬುದೇ ಗೊತ್ತಿರಲಿಲ್ಲ: ಯುಪಿಎಸ್‌ಸಿ ಪಾಸಾದ ಕಂಡಕ್ಟರ್ ಮಗ ಸಿದ್ದಲಿಂಗಪ್ಪ ತಾಯಿಯ ಮಾತು
ಧಾರವಾಡ: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಕಳೆದ ವರ್ಷ ನಡೆಸಿದ್ದ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶ ಮಂಗಳವಾರ ಪ್ರಕಟಿಸಿದ್ದು, ಧಾರವಾಡ ತಾಲೂಕಿನ ಅಣ್ಣಿಗೇರಿ ಪಟ್ಟಣದ ನಿವಾಸಿ ಸಿದ್ದಲಿಂಗಪ್ಪ ಕೆ ಪೂಜಾರ್ 589 ರ‍್ಯಾಂಕ್ ಪಡೆಯುವ ಮೂಲಕ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಕರಿಸಿದ್ಧಪ್ಪ ಹಾಗೂ ಶಾಂತವ್ವ ದಂಪತಿಯ ಹಿರಿಯ ಮಗ ಸಿದ್ದಲಿಂಗಪ್ಪ ಕೆ. ಪೂಜಾರ್ ಎಸೆಸೆಲ್ಸಿವರೆಗೂ ಅಣ್ಣಿಗೇರಿಯಲ್ಲಿಯೇ ಕನ್ನಡ ಮಾಧ್ಯಮದಲ್ಲಿ ಓದಿ ಬಳಿಕ ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜಿಗೆ ಹೋಗಿ ಪಿಯುಸಿ ಮುಗಿಸಿದ್ದಾರೆ. ಈತನ ತಂದೆ ಕೆಎಸ್ಸಾರ್ಟಿಸಿ ಕಂಡಕ್ಟರ್ ಆಗಿದ್ದಾರೆ.
ಇನ್ನು ಮಗನ ಸಾಧನೆಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿದ್ದಲಿಂಗಪ್ಪ ತಾಯಿ, "ನನ್ನ ಮಗ ಏನು ಓದುತ್ತಿದ್ದಾನೆ ಎಂಬುದೇ ನನಗೆ ಗೊತ್ತಿರಲಿಲ್ಲ, ದೊಡ್ಡ ಪರೀಕ್ಷೆ ಬರೆದು ನಮ್ಮ ಮಗ ಧಾರವಾಡ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ನಮ್ಮ ಮಗ ಅತ್ಯಂತ ದೊಡ್ಡ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾನೆ. ಅವನು ಇಷ್ಟು ದೊಡ್ಡ ಪರೀಕ್ಷೆಯಲ್ಲಿ ಪಾಸ್ ಆಗುತ್ತಾನೆ ಎಂದು ನಿರೀಕ್ಷೆ ಇರಲಿಲ್ಲ'' ಎಂದು ಖುಷಿ ಹಂಚಿಕೊಂಡಿದ್ದಾರೆ.
''ಅವನ ಈ ಸಾಧನೆಗೆ ನಾವು ಕಾರಣರಲ್ಲ, ಏನು ಓದುತ್ತಿದ್ದಾನೆ ಎಂಬುದೇ ನನಗೆ ಗೊತ್ತಿರಲಿಲ್ಲ ಎಂದ ಅವರು, ಏನು ಓದುತ್ತೇನೆ ಅಂತ ಅವನೂ ಹೇಳಿರಲಿಲ್ಲ'' ಎಂದು ತಿಳಿಸಿದ್ದಾರೆ.