ಕೊಪ್ಪಳ: ವಿದ್ಯುತ್ ಬಿಲ್ ಕಟ್ಟಲು ಹೇಳಿದಕ್ಕೆ ಸಿಬ್ಬಂದಿಗೆ ಚಪ್ಪಲಿಯಿಂದ ಹಲ್ಲೆ
Update: 2023-05-24 11:25 IST
ಕೊಪ್ಪಳ: ವಿದ್ಯುತ್ ಬಿಲ್ ಬಾಕಿ ವಸೂಲಿಗೆ ಹೋಗಿದ್ದ ಜೆಸ್ಕಾಂ ಸಿಬ್ಬಂದಿಗೆ ವ್ಯಕ್ತಿಯೊಬ್ಬ ಚಪ್ಪಲಿಯಿಂದ ಥಳಿಸಿರುವ ಘಟನೆ ತಾಲೂಕಿನ ಕುಕನಪಳ್ಳಿ ಗ್ರಾಮದಲ್ಲಿ ವರದಿಯಾಗಿದೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಾನು ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಕೂಗಾಡುತ್ತಾ ಗ್ರಾಮದ ಚಂದ್ರಶೇಖರ ಹಿರೇಮಠ ಎಂಬಾತ ಜೆಸ್ಕಾಂ ಸಿಬ್ಬಂದಿಯನ್ನು ಎಳೆದಾಡಿ ಬಾರಿಸಿದ್ದಾನೆ. ಬಳಿಕ ಅವಾಚ್ಯ ಶಬ್ದದಿಂದ ನಿಂದಿಸಿದ್ದಲ್ಲದೆ, ಕಾಲಲ್ಲಿರುವ ಚಪ್ಪಲಿಯನ್ನು ತೆಗೆದುಕೊಂಡು ಹಲ್ಲೆ ಮಾಡಿರುವುದು ವೀಡಿಯೊದಲ್ಲಿ ದಾಖಲಾಗಿದೆ.
ಸದ್ಯ ಹಲ್ಲೆ ನಡೆಸಿದ ಚಂದ್ರಶೇಖರ ವಿರುದ್ಧ ಜೆಸ್ಕಾಂ ಸಿಬ್ಬಂದಿ ಮಂಜುನಾಥ್ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ