×
Ad

UPSC ಪರೀಕ್ಷೆ: ಗೂಡಂಗಡಿ ವ್ಯಾಪಾರಿಯ ಪುತ್ರನಿಗೆ 588ನೇ ರ‍್ಯಾಂಕ್‌

Update: 2023-05-24 13:41 IST

ವಿಜಯಪುರ: ಕೇಂದ್ರ ಲೋಕಸೇವಾ ಆಯೋಗ(UPSC)ದ 2022ನೇ ಸಾಲಿನ ಪರೀಕ್ಷೆಯಲ್ಲಿ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ಬಡ ಕುಟುಂಬದ ಸತೀಶ್ ಸೋಮಜಾಳ 588ನೇ ರ‍್ಯಾಂಕ್‌ ಗಳಿಸಿ ಉತ್ತಮ ಸಾಧನೆ ಮೆರೆದಿದ್ದಾರೆ.

ತಂದೆ ಗೂಡಂಗಡಿ ವ್ಯಾಪಾರಿಯಾಗಿದ್ದರೆ, ತಾಯಿ ಗೃಹಿಣಿ. ಸಾಧನೆಗೆ ಬಡತನದ ಹಂಗಿಲ್ಲ ಎಂಬುದಕ್ಕೆ ಸತೀಶ್ ಸಾಕ್ಷಿ.

ಅತ್ಯಂತ ಹಿಂದುಳಿದ ತಾಲೂಕು ಎಂದೇ ಗುರುತಿಸಲ್ಪಟ್ಟಿರುವ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಪುಟ್ಟ ಗೂಡಂಗಡಿ ಇರಿಸಿಕೊಂಡು ಜೀವನ ಸಾಗಿಸುತ್ತಿರುವ ಶ್ರೀಶೈಲ ಸೋಮಜಾಳ ಅವರ ಪುತ್ರ ಸತೀಶ್ ಯುಪಿಎಸ್‌ಸಿ ಉತ್ತೀರ್ಣರಾಗುವುದರೊಂದಿಗೆ ಗ್ರಾಮಸ್ಥರ ಕಣ್ಮಣಿ ಆಗಿದ್ದಾರೆ.

 ಸತೀಶ ಹುಟ್ಟೂರು ಹಿರೇಮಸಳಿಯಾದರೂ ಬಾಲ್ಯ ಕಳೆದಿದ್ದು ಸಿಂದಗಿ ತಾಲೂಕಿನ ದೇವಣಗಾಂವ ಮತ್ತು ವಿಜಯಪುರ ನಗರದಲ್ಲಿ. ದೇವಣಗಾಂವದಲ್ಲಿ ಪೂರ್ವ ಪ್ರಾಥಮಿಕ (1ರಿಂದ 5) ಮುಗಿಸಿದ್ದು, 5ನೇ ತರಗತಿಯಿಂದ ದ್ವಿತೀಯ ಪಿಯುಸಿಯವರೆಗೆ ಸೈನಿಕ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ಸೈನಿಕ ಶಾಲೆಯ ವಾತಾವರಣವೇ ಯುಪಿಎಸ್‌ಸಿ ತೇರ್ಗಡೆಯಾಗಲು ಪ್ರೇರಣೆ ಎನ್ನುತ್ತಾರೆ ಸತೀಶ್.

ಬೆಳಗಾವಿಯ ಗೋಗಟೆ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿರುವ ಸತೀಶ ಸೋಮಜಾಳ 2018ರಿಂದ ಯುಪಿಎಸ್‌ಸಿಗೆ ಸಿದ್ಧತೆ ನಡೆಸಿದರು. 2019ರಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಿಲಿಮ್ಸ್‌ನಲ್ಲಿ ಅನುತ್ತೀರ್ಣರಾದರು. 2020ರಲ್ಲಿ ಪ್ರಿಲಿಮ್ಸ್ ತೇರ್ಗಡೆಯಾದರೂ ಮುಖ್ಯ ಪರೀಕ್ಷೆ ಕೈಕೊಟ್ಟಿತು. ಛಲ ಬಿಡದೆ ಪ್ರಯತ್ನಿಸಿದ ಸತೀಶಗೆ 2021ರಲ್ಲೂ ಪ್ರಿಲಿಮ್ಸ್ ಅನುತ್ತೀರ್ಣರಾದರು. 2022ರ ಪ್ರಯತ್ನ ಫಲ ನೀಡಿದ್ದು, 588ನೇ ರ‍್ಯಾಂಕ್‌ ಗಳಿಸಿದ್ದಾರೆ. ಇದನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿರುವ ಸತೀಶ್, ಸತತ ಪ್ರಯತ್ನ, ಗಂಭೀರ ಓದು, ತಾಳ್ಮೆ ಸಾಧನೆಯ ಗುಟ್ಟು. ಒಂದು ವರ್ಷ ದಿಲ್ಲಿಯಲ್ಲಿ ತರಬೇತಿ ಪಡೆದಿದ್ದೆ ಎಂದು ಹೇಳಿದ್ದಾರೆ.

ಬ್ಯಾಂಕ್ ಸಾಲ ಪಡೆದು ಶಿಕ್ಷಣ ಪೂರೈಸಿದೆ. ತಂದೆ ಗೂಡಂಗಡಿ ಇಟ್ಟುಕೊಂಡಿದ್ದರೂ ಚೆನ್ನಾಗಿ ಓದಿಸಿದರು. ತಾಯಿ ಮತ್ತು ಸಹೋದರರ ಸಹಕಾರದಿಂದ ಸಾಧನೆ ಸಾಧ್ಯವಾಯಿತು ಎಂದು ಸತೀಶ್ ಸಂತಸ ವ್ಯಕ್ತಪಡಿಸುತ್ತಾರೆ.

Similar News