UPSC ಪರೀಕ್ಷೆ: 260ನೇ ರ‍್ಯಾಂಕ್ ಗಳಿಸಿದ ಸೌರಭ್ ಸಾಧನೆಗೆ ಪುನೀತ್ ರ ಪೃಥ್ವಿ ಸಿನೆಮಾವೇ ಪ್ರೇರಣೆ!
ಮೈಸೂರು: 2022ನೇ ಸಾಲಿನ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಮೈಸೂರಿನ ವಿಜಯನಗರದ ಕೆ.ಸೌರಭ್ 260ನೇ ರ‍್ಯಾಂಕ್ ಗಳಿಸಿದ ಸಾಧನೆ ಮಾಡಿದ್ದಾರೆ.
ಮೈಸೂರಿನ ವಿಜಯನಗರದ ನಿವಾಸಿ ಡಾ.ಕೆಂಪರಾಜು, ಹಾಗೂ ಡಾ.ಎಂ.ಜಾನಕಿ ದಂಪತಿಯ ಪುತ್ರರಾಗಿರುವ ಸೌರಭ್ ಅವರಿಗೆ ಈ ಸಾಧನೆ ಮಾಡಲು ಪುನೀತ್ ರಾಜ್ ಕುಮಾರ್ ಅಭಿನಯದ 'ಪೃಥ್ವಿ' ಸಿನಿಮಾ ಪ್ರೇರಣೆ ನೀಡಿದೆಯಂತೆ.
ಡೆಹ್ರಾಡೂನ್ ನ ಇಂದಿರಾ ಗಾಂಧಿ ರಾಷ್ಟ್ರೀಯ ಅರಣ್ಯ ಅಕಾಡಮಿಯಲ್ಲಿ ಭಾರತೀಯ ಅರಣ್ಯ ಸೇವೆಯಲ್ಲಿರುವ ಅವರು ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ಮುಂದುವರಿಸಿ ವಿದೇಶಾಂಗ ಸೇವೆ ಸೇರುವ ಕನಸನ್ನು ನನಸು ಮಾಡಿಕೊಂಡಿದ್ದಾರೆ.
2021 ರಲ್ಲಿ ಭಾರತೀಯ ಅರಣ್ಯ ಸೇವೆ ಹಾಗೂ ನಾಗರಿಕ ಸೇವಾ ಪರೀಕ್ಷೆಗಳೆರಡರಲ್ಲೂ ಉತ್ತೀರ್ಣರಾಗಿರುವ ಸೌರಭ್, ಅರಣ್ಯ ಸೇವಾ ಪರೀಕ್ಷೆಯಲ್ಲಿ 45ನೇ ರ್ಯಾಂಕ್ ಪಡೆದಿದ್ದರಿಂದ ಅದನ್ನೆ ಆಯ್ಕೆ ಮಾಡಿಕೊಂಡೆ. ಇದೀಗ ವಿದೇಶಾಂಗ ಸೇವೆ ಸಿಗುವ ನಿರೀಕ್ಷೆ ಇದೆ ಎಂದು ಸಂತಸ ಹಂಚಿಕೊಂಡರು.
ಪದವಿ ಓದುವಾಗ ಪುನೀತ್ ರಾಜ್ ಕುಮಾರ್ ಅವರ ಪೃಥ್ವಿ ಸಿನಿಮಾ ಆಕರ್ಷಿಸಿತ್ತು. ಈಗಲೂ ಸಿನೆಮಾವನ್ನು ನೆನೆದರೆ ರೋಮಾಂಚನವಾಗುತ್ತದೆ. ದಿಲ್ಲಿಗೆ ತೆರಳಿ ವಾಜಿರಾಮ್ ಆ್ಯಂಡ್ ರವಿಯಲ್ಲಿ ಕೋಚಿಂಗ್ ಪಡೆದೆ. ನಂತರ ಮನೆಯಲ್ಲಿ ತಯಾರಿ ನಡೆಸಿದೆ ಎಂದು ಹೇಳಿದರು.