×
Ad

ಜೆಸ್ಕಾಂ ಸಿಬ್ಬಂದಿಗೆ ಥಳಿತ: ಕಾಂಗ್ರೆಸ್‌ ಗ್ಯಾರಂಟಿ ಕಾರಣ ಅಲ್ಲ; ವಾಸ್ತವ ಇಲ್ಲಿದೆ...

Update: 2023-05-24 20:09 IST

ಕೊಪ್ಪಳ: ವಿದ್ಯುತ್‌ ಬಿಲ್ ಬಾಕಿ ವಸೂಲಿಗೆ ಹೋಗಿದ್ದ ಜೆಸ್ಕಾಂ ಸಿಬ್ಬಂದಿಗೆ ವ್ಯಕ್ತಿಯೊಬ್ಬ ಚಪ್ಪಲಿಯಿಂದ ಥಳಿಸಿರುವ ಘಟನೆಯನ್ನು ಕಾಂಗ್ರೆಸ್‌ ಗ್ಯಾರಂಟಿಗಳನ್ನು ನಂಬಿ ವಿದ್ಯುತ್‌ ಬಿಲ್‌ ಕಟ್ಟಲು ಗ್ರಾಹಕ ನಿರಾಕರಿಸಿ, ಜೆಸ್ಕಾಂ ಸಿಬ್ಬಂದಿಗೆ ಹಲ್ಲೆ ನಡೆಸಿದ್ದಾಗಿ ಸುಳ್ಳು ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ. ಆದರೆ ಈ ಘಟನೆ  ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದಿರುವ ಗ್ರಾಹಕ ಇಲಾಖೆ ಸಿಬ್ಬಂದಿಗೆ ಹಲ್ಲೆ ನಡೆಸಿದ್ದಾನೆಂದು ಕೊಪ್ಪಳ ಎಸ್‌ಪಿ ಸ್ಪಷ್ಟಪಡಿಸಿದ್ದಾರೆ. 

ಚಂದ್ರಶೇಖರ್ ಹಿರೇಮಠ್ ಎಂಬವರು 9000 ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದರು, ಇದಕ್ಕಾಗಿ ಜೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಿತ್ತು. ಆರೋಪಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಾನೆ ಎನ್ನಲಾಗಿದ್ದು, ಇದನ್ನು ಪ್ರಶ್ನಿಸಿದಾಗ ಅಧಿಕಾರಿಗಳ ಹಲ್ಲೆ ನಡೆಸಿದ್ದಾರೆ ಎಂದು ಎಸ್‌ಪಿ ಸ್ಪಷ್ಟಪಡಿಸಿದ್ದಾರೆ.

ಜೆಸ್ಕಾಂ ಸಿಬ್ಬಂದಿ ಮೇಲೆ ಆರೋಪಿ ಹಲ್ಲೆ ನಡೆಸಿರುವ ವಿಡಿಯೋ ವೈರಲ್‌ ಆಗಿದ್ದು, ಕಾಂಗ್ರೆಸ್‌ ಗ್ಯಾರಂಟಿಯನ್ನು ನಂಬಿ ಗ್ರಾಹಕರು ವಿದ್ಯುತ್‌ ಬಿಲ್‌ ಕಟ್ಟುತ್ತಿಲ್ಲ, ಬಿಲ್ ಕೇಳಲು ಹೋದ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸುಳ್ಳು ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೊಪ್ಪಳದ ಕುಕನಪಲ್ಲಿ ಗ್ರಾಮದಲ್ಲಿ ವಿದ್ಯುತ್​ ಬಿಲ್​ ವಸೂಲಿಗೆ ಬಂದ ಲೈನ್​ಮ್ಯಾನ್​ಗೆ ವ್ಯಕ್ತಿಯೊಬ್ಬ ಅವಾಚ್ಯ ಶಬ್ದದಿಂದ ನಿಂದಿಸಿದ್ದಲ್ಲದೆ, ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿದ್ದಾನೆ. ಲೈನ್​ಮ್ಯಾನ್ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿಯನ್ನು ಕೊಪ್ಪಳ ಜಿಲ್ಲೆ ಮುನಿರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಕೊಪ್ಪಳದಲ್ಲಿ ಎಸ್​ಪಿ ಯಶೋಧಾ ವಂಟಗೋಡಿ ಮಾತನಾಡಿ, “ಲೈನ್​ಮ್ಯಾನ್ ಮಂಜುನಾಥ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ವ್ಯಕ್ತಿ ಚಂದ್ರಶೇಖರಯ್ಯ. ಈತ ಕಳೆದ ಆರು ತಿಂಗಳಿಂದ ಬಿಲ್ ಬಾಕಿ ಉಳಿಸಿಕೊಂಡಿದ್ದನ. ಅಂದಾಜು 9990 ರೂ. ಬಿಲ್ ಬಾಕಿ ಉಳಿಸಿಕೊಂಡಿದ್ದನು” ಎಂದಿದ್ದಾರೆ.

“ವಿದ್ಯುತ್​​​​​ ಬಿಲ್​​ ಕಟ್ಟದ ಹಿನ್ನೆಲೆಯಲ್ಲಿ ಜೆಸ್ಕಾಂ ಸಿಬ್ಬಂದಿ ಚಂದ್ರಶೇಖರಯ್ಯ ಮನೆಯ ಕರೆಂಟ್​​ ಲೈನ್ ಕಟ್ ಮಾಡಿದ್ದರು. ಆದರೂ ಮತ್ತೆ ಅನಧಿಕೃತ ವಿದ್ಯುತ್ ಸಂರ್ಪಕ ಪಡೆದಿದ್ದ ಚಂದ್ರಶೇಖರಯ್ಯ. ಅಕ್ರಮ ವಿದ್ಯುತ್ ​​ಸಂಪರ್ಕ ಪಡೆದಿದ್ದನ್ನೇ ಪ್ರಶ್ನಿಸೋಕೆ ಬಂದಿದ್ದ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆ ನಡೆಸಿದ ಚಂದ್ರಶೇಖರಯ್ಯ ವಿರುದ್ಧ ಮಂಜುನಾಥ್​ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೀಗಾಗಿ ಚಂದ್ರಶೇಖರಯ್ಯ ಅವರನ್ನು ಬಂಧಿಸಿದ್ದೇವೆ. ಮುಂದೆ ಕಾನೂನು ಕ್ರಮ‌ ಕೈಗೊಳ್ಳುತ್ತೇವೆಂದು” ಎಂದು ಎಸ್‌ಪಿ ತಿಳಿಸಿದ್ದಾರೆ.

Similar News