'ದಿ ಕೇರಳ ಸ್ಟೋರಿ' ನಿಷೇಧಕ್ಕೆ ವೆಲ್ಫೇರ್ ಪಾರ್ಟಿ ಆಗ್ರಹ

Update: 2023-05-25 06:24 GMT

ಬೆಂಗಳೂರು : ಇಸ್ಲಾಂ ಧರ್ಮವನ್ನು ತೇಜೋವಧೆ ಮಾಡುವ ಹುನ್ನಾರವಿರುವ ದಿ ಕೇರಳ ಸ್ಟೋರಿ ಚಲನಚಿತ್ರವನ್ನು ಕರ್ನಾಟಕ ರಾಜ್ಯದಲ್ಲಿ ಪ್ರದರ್ಶನಕ್ಕೆ ಕೂಡಲೇ ನಿಷೇಧ ಮಾಡಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೀರ್ ಹುಸೇನ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿದ ಅವರು,ದಿ ಕೇರಳ ಸ್ಟೋರಿ ಚಿತ್ರದ ಪ್ರದರ್ಶನ ಮುಂದುವರಿದರೆ ರಾಜ್ಯದಲ್ಲಿ ಅಹಿತಕರ ಘಟನೆ ಆಗುವ ಸಂಭವ ಇದೆ. ಈ ಚಲನ ಚಿತ್ರ ವನ್ನು ಕೋಮು ಧ್ರುವೀಕರಣಕ್ಕೆ ಬಳಸಲಾಗುತ್ತಿದೆ. ರಾಜ್ಯದ ಕೆಲವೊಂದು ಶಿಕ್ಷಣ ಸಂಸ್ಥೆಗಳಲ್ಲಿ ಉಚಿತವಾಗಿ ಸಿನಿಮಾವನ್ನು ತೋರಿಸುವ ನಿರ್ಧಾರ ಮಕ್ಕಳಲ್ಲಿ ಕೋಮುವಾದ ತುಂಬುವ ಹುನ್ನಾರವಾಗಿದೆ. ಇದು ಅತ್ಯಂತ ಖಂಡನೀಯವಾಗಿದ್ದು, ರಾಜ್ಯ ಸರಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ವಿವಾದಾತ್ಮಕ ಹಾಗೂ ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿರುವ ಈ ಚಲನಚಿತ್ರ ವೀಕ್ಷಣೆಗೆ ಕೋಮುವಾದಿ ಶಕ್ತಿಗಳು ಪ್ರಚೋದನೆ ನೀಡುತ್ತಿವೆ. ಶಾಂತಿಯುತವಾಗಿರುವ ಸಮಾಜದಲ್ಲಿ ಅಶಾಂತಿ ಬಿತ್ತಿ ಕೋಮು ಗಲಭೆಗಳನ್ನು ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ. ಕೂಡಲೇ ರಾಜ್ಯ ಸರಕಾರ ಇತ್ತ ಗಮನ ಹರಿಸಿ ದಿ ಕೇರಳ ಸ್ಟೋರಿ ವಿವಾದಾತ್ಮಕ ಚಲನಚಿತ್ರ ಪ್ರದರ್ಶನ ನಿಷೇಧಿಸಬೇಕೆಂದು ಪುನರುಚ್ಚರಿಸಿದರು.

Similar News