ಸಿಎಂ ಸಿದ್ದರಾಮಯ್ಯಗೆ ಈಗಲೂ ಬಿಜೆಪಿಯಿಂದ ಜೀವ ಬೆದರಿಕೆ ಇದೆ: ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆರೋಪ
Update: 2023-05-25 12:55 IST
ಮೈಸೂರು, ಮೇ 25: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಲೂ ಬಿಜೆಪಿಯಿಂದ ಜೀವ ಬೆದರಿಕೆ ಇದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಿದ್ದರಾಮಯ್ಯರನ್ನು ಹೊಡೆದು ಹಾಕಿ ಎಂಬ ಮಾಜಿ ಸಚಿವ ಅಶ್ವತ್ಥನಾರಾಯಣ ಅವರ ಭಾಷಣದ ವೀಡಿಯೊ ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಿಂದ ಸಿದ್ದರಾಮಯ್ಯರ ಮೇಲೆ ಮತ್ತೆ ದಾಳಿಯಾಗುವ ಸಾಧ್ಯತೆ ಇದೆ. ಅದೇ ಕಾರಣಕ್ಕೆ ಅಶ್ವತ್ಥನಾರಾಯಣ ವಿರುದ್ಧ ನಾವು ಮತ್ತೆ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಿಸುತ್ತಿದೇವೆ' ಎಂದು ತಿಳಿಸಿದರು.
'ಸಿದ್ದರಾಮಯ್ಯ ಅವರಿಗೆ ಏನೇ ಆದರೂ ಅದಕ್ಕೆ ಬಿಜೆಪಿ, ಅಶ್ವತ್ಥನಾರಾಯಣ ಅವರೇ ಹೊಣೆ' ಎಂದು ಹೇಳಿದರು.