ನಾಲ್ಕೈದು ತಿಂಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆ: ಅಚ್ಚರಿ ಮೂಡಿಸಿದ ಬೊಮ್ಮಾಯಿ, ಎಚ್ ಡಿಕೆ ಹೇಳಿಕೆ

''ಈ ಸರಕಾರದ ಭವಿಷ್ಯ ಲೋಕಸಭಾ ಚುನಾವಣೆ ಮೇಲೆ ನಿಂತಿದೆ''

Update: 2023-05-25 12:40 GMT

ಹಾವೇರಿ: 'ನಾಲ್ಕೈದು ತಿಂಗಳಲ್ಲಿ ರಾಜ್ಯದ ರಾಜಕೀಯ ಚಿತ್ರಣ ಬದಲಾವಣೆಯಾಗಲಿದೆ' ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಶಿಗ್ಗಾಂವಿಯಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಕಾಂಗ್ರೆಸ್ ಸರ್ಕಾರ ಹೋಗುವಂತ ದಾರಿ ನೋಡಿದರೆ ಬಹಳ ದಿನ‌ ನಡೆಯಲ್ಲ. ಬಿಜೆಪಿ ನಾಯಕರು, ಕಾರ್ಯಕರ್ತರ ಮೇಲೆ ಕೇಸ್ ಹಾಕುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್​​ನವರಿಗೆ ನಮ್ಮ ಕಾರ್ಯಕರ್ತರು ತಲೆಬಾಗುವ ಪ್ರಶ್ನೆ ಇಲ್ಲ. ಎಲ್ಲೋ ಅಲ್ಪಸ್ವಲ್ಪ ವ್ಯತ್ಯಾಸ ಆಗಿದಕ್ಕೆ ನಾವು ಸೋತಿರಬಹುದು. ಆದರೆ ನಾವು ಸ್ವಾಭಿಮಾನ ಕಳೆದುಕೊಂಡಿಲ್ಲ. ಮೋದಿಯವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಎದುರಿಸುತ್ತೇವೆ. ರಾಜ್ಯದಲ್ಲಿ ಮತ್ತೆ 25ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಚ್ ಡಿಕೆ ಹೇಳಿದ್ದೇನು?

ಬೆಂಗಳೂರಿನ ಅರಮನೆ ಮೈದಾನದಲ್ಲಿಂದು ಜೆಡಿಎಸ್ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ, 'ಕಾಂಗ್ರೆಸ್ ಸರಕಾರ 5 ವರ್ಷಗಳ ಕಾಲ ಇರುತ್ತೋ ಇಲ್ವೋ ಗೊತ್ತಿಲ್ಲ. ಈ ಸರಕಾರದ ಭವಿಷ್ಯ ಲೋಕಸಭಾ ಚುನಾವಣೆ ಮೇಲೆ ನಿಂತಿದೆ. ನಾನು ಭವಿಷ್ಯ ಹೇಳುತ್ತಿಲ್ಲ, ರಾಜಕೀಯ ಸ್ಥಿತಿಗತಿ ನೋಡಿ ಹೇಳುತ್ತಿದ್ದೇನೆ' ಎಂದು ಹೇಳಿಕೆ ನೀಡಿದ್ದಾರೆ. 

ಇತ್ತೀಚೆಗೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲೂ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದ ಕುಮಾರಸ್ವಾಮಿ, 'ನವೆಂಬರ್ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಗಳು ಆಗಲಿವೆ, ಕಾದು ನೋಡಿ' ಎಂದು ಅಚ್ಚರಿ ಮೂಡಿಸಿದ್ದರು.  

Similar News