'ಗ್ಯಾರಂಟಿ'ಗಳನ್ನು ಜೂನ್ 1 ರಿಂದಲೇ ಕೊಡಿ: ಸಂಸದ ಪ್ರತಾಪ್ ಸಿಂಹ ಒತ್ತಾಯ
''ಗ್ಯಾರಂಟಿಗಳಿಗೆ ಷರತ್ತು ಹಾಕಿದರೆ ಹೋರಾಟ ಮಾಡುತ್ತೇವೆ''
ಮೈಸೂರು: 'ಮತದಾರರು ಕಾಂಗ್ರೆಸ್ ಮುಖ ನೋಡಿ ಮತ ಹಾಕಿಲ್ಲ. ಕಾಂಗ್ರೆಸ್ ನೀಡಿದ ಕ್ಯಾರಂಟಿಗಳನ್ನು ನೋಡಿ ಮತ ಹಾಕಿದ್ದಾರೆ. ಹೀಗಾಗಿ ಗ್ಯಾರಂಟಿಗಳನ್ನು ಜೂನ್ 1 ರಿಂದಲೇ ಕೊಡಿ. ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ' ಎಂದು ಕೊಡಗು- ಮೈಸೂರು ಸಂಸದ ಪ್ರತಾಪ್ ಸಿಂಹ ಸರಕಾರವನ್ನು ಎಚ್ಚರಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರತಾಪ್ ಸಿಂಹ ಅವರು, 'ಗ್ಯಾರಂಟಿ ಕಾರ್ಡ್ ಅಲ್ಲಿ ಷರತ್ತುಗಳು ಅನ್ವಯವಾಗುತ್ತದೆ ಎಂದು ಎಲ್ಲೂ ಹಾಕಿಲ್ಲ.ಎಲ್ಲಾ ಮನೆಯ ಯಜಮಾನಿಗೆ 2 ಸಾವಿರ ಕೊಡಬೇಕು. ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪಯಣಕ್ಕೆ ಅವಕಾಶ ಕೊಡಬೇಕು. ಜೂನ್ 1 ರವರೆಗೆ ಕಾಯುತ್ತೇನೆ. ಜೂನ್ 1 ರಿಂದ 200 ಯೂನಿಟ್ ಒಳಗೆ ವಿದ್ಯುತ್ ಬಿಲ್ ಬಂದರೆ ಬಿಲ್ ಕಟ್ಟಬೇಡಿ. 200 ಯೂನಿಟ್ ಮೇಲೆ ಎಷ್ಟು ಯೂನಿಟ್ ಬಳಸುತ್ತಿರಾ ಹೆಚ್ಚುವರಿಗೆ ಮಾತ್ರ ಕಟ್ಟಿ. ಕಂಡಿಷನ್ ಹಾಕಿದರೆ ಜೂನ್ 1 ರಿಂದ ಜನರ ಪರವಾಗಿ ಹೋರಾಟ ಮಾಡುತ್ತೇವೆ' ಎಂದು ಹೇಳಿದರು.
''ಬಿಜೆಪಿ ಶೇ. 40 ಸರಕಾರ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕೂಡಲೇ ಇದರ ವಿರುದ್ಧ ತನಿಖೆಗೆ ಆದೇಶಿ. ತಪ್ಪಿತಸ್ಥರು ಯಾರೇ ಇರಲಿ ಅವರ ವಿರುದ್ಧ ಕ್ರಮಕೈಗೊಳ್ಳಿ'' ಎಂದು ಸವಾಲು ಹಾಕಿದರು.