×
Ad

ಚುನಾವಣಾ ಆಯೋಗದ ‘ಛಾಯಾಚಿತ್ರ ಸ್ಪರ್ಧೆ’; ತಾಜುದ್ದೀನ್ ಆಝಾದ್‍ಗೆ ಪ್ರಥಮ, ಇಂದ್ರಕುಮಾರ್ ಗೆ ದ್ವೀತಿಯ ಬಹುಮಾನ

Update: 2023-05-25 17:54 IST

ಬೆಂಗಳೂರು, ಮೇ 25: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಏರ್ಪಡಿಸಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕಲಬುರಗಿಯ ಪ್ರಜಾವಾಣಿ ಪತ್ರಿಕೆ ಹಿರಿಯ ಛಾಯಾಗ್ರಾಹಕ ತಾಜುದ್ದೀನ್ ಆಝಾದ್ ಪ್ರಥಮ, ಬಾಗಲಕೋಟೆಯ ಹಳ್ಳಿ ಸಂದೇಶ ಸುದ್ದಿಪತ್ರಿಕೆಯ ಇಂದ್ರಕುಮಾರ್ ದಸ್ತೇನವರ್ ದ್ವಿತೀಯ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.

ಪ್ರಥಮ ಬಹುಮಾನ 25 ಸಾವಿರ ರೂ., ದ್ವಿತಿಯ ಬಹುಮಾನ 15ಸಾವಿರ ರೂ. ತೃತೀಯ ಬಹುಮಾನಕ್ಕೆ ಛಾಯಾಗ್ರಾಹಕ ಫಕ್ರುದ್ದೀನ್ ಎಚ್.ಆಯ್ಕೆಯಾಗಿದ್ದು 10 ಸಾವಿರ ರೂ.ನಗದು ಬಹುಮಾನ ನೀಡಲಾಗುವುದು. ಹಿರಿಯ ಛಾಯಾಗ್ರಾಹಕರಾದ ಸುರೇಶ್ ಪಿ. ಹಾಗೂ ಎನ್.ನರಸಿಂಹಮೂರ್ತಿಗೆ ಸಮಾಧಾನಕರ ಬಹುಮಾನ 3ಸಾವಿರ ರೂ. ಹಾಗೂ ಹವ್ಯಾಸಿ ಛಾಯಾಗ್ರಾಹಕ ಕೆ.ವೆಂಕಟೇಶ್‍ಗೆ ಬೆಂಗಳೂರು ವಿಶೇಷ ಬಹುಮಾನ 5ಸಾವಿರ ರೂಪಾಯಿಗಳ ಬಹುಮಾನ ಘೋಷಿಸಲಾಗಿದೆ.

ಮೇ 10ರಂದು ನಡೆದ ಮತದಾನದ ದಿನದ ವಿಷಯಕ್ಕೆ ಸಂಬಂಧಿಸಿದಂತೆ ಸ್ಪರ್ಧೆಗೆ ಛಾಯಾಚಿತ್ರಗಳನ್ನು ಕಳುಹಿಸಲು ಮೇ 20 ಕೊನೆಯ ದಿನವಾಗಿತ್ತು. ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 63 ಪತ್ರಿಕಾ ಛಾಯಾಗ್ರಾಹಕರು/ಹವ್ಯಾಸಿ ಛಾಯಾಗ್ರಹಕರು ಭಾಗವಹಿಸಿದ್ದರು. ಸೂಕ್ತ ಶೀರ್ಷಿಕೆಯೊಂದಿಗೆ 5 ಛಾಯಾಚಿತ್ರಗಳನ್ನು ಕಳುಹಿಸಲು ತಿಳಿಸಲಾಗಿತ್ತು. ಸ್ಪರ್ಧೆಯಲ್ಲಿ ಸಲ್ಲಿಕೆಯಾಗಿದ್ದ ಛಾಯಾಚಿತ್ರಗಳನ್ನು ಸೂಕ್ತಮಾರ್ಗ ಸೂಚಿಗಳನ್ವಯ ಪರಿಶೀಲಿಸಿ ಆಯ್ಕೆಮಾಡಲು ಆಯ್ಕೆ ಸಮಿತಿ ರಚಿಸಲಾಗಿತ್ತು. ಇಂದು ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಉತ್ತಮ ಛಾಯಾಚಿತ್ರಗಳನ್ನು ಬಹುಮಾನಗಳಿಗೆ ಶಿಫಾರಸ್ಸು ಮಾಡಿ ವಿಜೇತರನ್ನು ಘೋಷಿಸಲಾಯಿತು.

Similar News