ಮಡಿಕೇರಿ | ಆನೆ ದಂತದಿಂದ ಮಾಡಿದ ಆಭರಣ ಮಾರಾಟಕ್ಕೆ ಯತ್ನ: ಆರೋಪಿಯ ಬಂಧನ

Update: 2023-05-25 13:17 GMT

ಮಡಿಕೇರಿ ಮೇ 25 : ಅಮೂಲ್ಯ ಹರಳುಗಳನ್ನು ಒಳಗೊಂಡ ಆನೆ ದಂತದಿಂದ ಮಾಡಿರುವ 2 ಕಡಗ(ಕೈಗೆ ಧರಿಸುವ ಆಭರಣ)ಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವ ಆರೋಪಿಯನ್ನು ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಂಧಿಸಿದ್ದಾರೆ.

ಕೊಳ್ಳೇಗಾಲ ಮೂಲದ ಪಿ.ಪ್ರದೀಪ್ ಕುಮಾರ್(42) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಸಿದ್ದಾಪುರ ಕಡೆಗೆ ತೆರಳುವ ಮಾರ್ಗದ ಬಸ್ ತಂಗುದಾಣದ ಬಳಿ ಆನೆ ದಂತದಿಂದ ಮಾಡಿರುವ ಕೈ ಬಳೆ ಮಾದರಿಯ ನೀಲಿ ಮತ್ತು ಹಸಿರು ಬಣ್ಣದ ಅಮೂಲ್ಯ ಹರಳುಗಳನ್ನು ಒಳಗೊಂಡಿದ್ದ 2 ಕಡಗಗಳನ್ನು ಮಾರಾಟ ಮಾಡಲು ಈತ ಯತ್ನಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಖಚಿತ ಮಾಹಿತಿಯ ಹಿನ್ನೆಲೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಸಂದರ್ಭ ಆರೋಪಿ ಮಾಲು ಸಹಿತ ಸೆರೆ ಸಿಕ್ಕಿದ್ದಾನೆ. ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಕುರಿತು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ವಿ.ಶರತ್‍ಚಂದ್ರ ಅವರ ನಿರ್ದೇಶನದಂತೆ ಮಡಿಕೇರಿ ಸಿ.ಐ.ಡಿ ಪೊಲೀಸ್  ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಕೆ.ಬಿ.ವಿಶ್ವನಾಥ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಪಿ.ಎಸ್.ಐ ಸಿ.ಯು.ಸವಿ, ಸಿಬ್ಬಂದಿಗಳಾದ ಶೇಖರ್, ರಾಘವೇಂದ್ರ, ಯೋಗೇಶ್, ಉಮೇಶ್, ಸ್ವಾಮಿ ಹಾಗೂ ಮಂಜುನಾಥ ಕಾರ್ಯಾಚರಣೆ ನಡೆಸಿದರು. 

Similar News