ಚಿಕ್ಕಮಗಳೂರು ಜಿಲ್ಲೆಯಲ್ಲಿ ತಗ್ಗಿದ ಮಳೆ: 63 ಲಕ್ಷ ರೂ. ನಷ್ಟ

Update: 2023-05-25 18:00 GMT

ಚಿಕ್ಕಮಗಳೂರು, ಮೇ 25: ಜಿಲ್ಲಾದ್ಯಂತ ಕಳೆದ ಮೂರು ದಿನಗಳಿಂದ ಅಬ್ಬರಿಸಿದ್ದ ಮುಂಗಾರು ಪೂರ್ವ ಮಳೆಯ ಆರ್ಭಟ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದ್ದು, ಮಳೆಯಿಂದ ಒಟ್ಟಾರೆ 63.58 ಲಕ್ಷ ರೂ. ಹಾನಿಯಾಗಿದೆ.

ಗುರುವಾರ ಅಲ್ಲಲ್ಲಿ ಮಳೆಯಾಗಿದೆ. ಗುಡುಗು, ಮೋಡ ಕವಿದ ವಾತಾವರಣ ಮುಂದುವರಿದಿದೆ. ಚಿಕ್ಕಮಗಳೂರು ನಗರದ ಸುತ್ತಮುತ್ತ ಮಧ್ಯಾಹ್ನ ಮಳೆ ಸುರಿದಿದ್ದು, ನಗರದ ರಸ್ತೆಗಳಲ್ಲಿ ಮಳೆಯ ನೀರು ಹರಿದು ಸಂಚಾರಕ್ಕೆ ಕೆಲವು ಹೊತ್ತು ಅಡ್ಡಿ ಉಂಟಾಗಿತ್ತು. ನಗರದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ದಿಢೀರ್ ಸುರಿದ ಮಳೆಯಿಂದ ಜನರು ಮನೆ ಸೇರಿಕೊಳ್ಳಲಾಗದೆ ಪರದಾಡಿದರು.

ಬಯಲುಸೀಮೆ ಭಾಗದಲ್ಲಿ ಬುಧವಾರ ರಾತ್ರಿ ಗುಡುಗು-ಸಿಡಿಲು, ಭಾರೀ ಗಾಳಿಯೊಂದಿಗೆ ಆಲಿಕಲ್ಲು ಮಳೆಯಾಗಿದ್ದು, ಸಖರಾಯಪಟ್ಟಣ ಅಗಲೇರಿ ಗ್ರಾಮದಲ್ಲಿ ಮೂರು ಮನೆಗಳಿಗೆ ಹಾನಿಯಾಗಿದೆ. ದೊಡ್ಡ ಪ್ರಮಾಣದ ಆಲಿಕಲ್ಲುಗಳು ಮನೆಯ ಮೇಲೆ ಬಿದ್ದ ಪರಿಣಾಮ ಗ್ರಾಮದ ಮಂಗಳಮ್ಮ, ರತ್ನಮ್ಮ, ರಂಗಣ್ಣ ಎಂಬವರ ಮನೆಗೆ ಛಾವಣಿಗೆ ಹಾಕಲಾಗಿದ್ದ ಹೆಂಚು ಮತ್ತು ಸಿಮೆಂಟ್ ಶೀಟ್‌ಗಳು ಮುರಿದು ಬಿದ್ದಿದ್ದು, ಮನೆಯಲ್ಲಿ ಆಹಾರ ಸಾಮಗ್ರಿಗಳು ಮತ್ತು ಪೀಠೋಪಕರಣಗಳು ಹಾನಿಯಾಗಿವೆ.

ಪಟ್ಟಣದ ಆಗಲೇರಿ ಗ್ರಾಮದ ಮಂಗಳಮ್ಮ, ರತ್ನಮ್ಮ, ರಂಗಣ್ಣ ಎಂಬವರ ಮನೆಗಳಿಗೆ ಹಾನಿಯಾಗಿದ್ದು, ಆಹಾರ ಪದಾರ್ಥ ಮತ್ತು ಪೀಠೋಪಕರಣಗಳಿಗೆ ಹಾನಿಯಾಗಿತ್ತು. ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಚ್.ಡಿ.ತಮ್ಮಯ್ಯ ಸೂಕ್ತ ಪರಿಹಾರ ನೀಡುವಂತೆ ಸ್ಥಳದಲ್ಲಿದ್ದ ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗೆ ಸೂಚನೆ ನೀಡಿದರು. ಮಳೆಯಿಂದ ಮನೆ ಛಾವಣಿ ಹಾಳಾಗಿರುವ ಮನೆಗಳಿಗೆ ಶೀಘ್ರವೇ ಟಾರ್ಪಲ್‌ಗಳನ್ನು ನೀಡುವಂತೆ ಪಿಡಿಒಗೆ ನಿರ್ದೇಶಿಸಿದರು.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಈವರೆಗೆ 115.3 ಮಿ.ಮೀ. ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ಜಿಲ್ಲಾದ್ಯಂತ ಮಳೆಯಾಗಿದ್ದು, ಜಿಲ್ಲೆಯ 8 ತಾಲೂಕುಗಳ ಪೈಕಿ ಕಡೂರು, ಚಿಕ್ಕಮಗಳೂರು, ಮೂಡಿಗೆರೆ ಹಾಗೂ ನರಸಿಂಹರಾಜಪುರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ. 

Similar News