ಬದುಕಿದ್ದ ವೃದ್ಧೆ ಹೆಸರಲ್ಲಿ ನಕಲಿ ಮರಣ ಪ್ರಮಾಣ ಪತ್ರ ಬಳಸಿ ಆಸ್ತಿ ಕಬಳಿಸಲು ಯತ್ನ: ದೂರು ದಾಖಲು

Update: 2023-05-26 05:19 GMT

ಬೇಲೂರು: ಬದುಕಿರುವ ಮಹಿಳೆ ಹೆಸರಿನಲ್ಲಿದ್ದ ಆಸ್ತಿ ಕಬಳಿಸಲು ಆಕೆಯ ಸಂಬಂಧಿಕರು, ನಕಲಿ ಮರಣ ದೃಢೀಕರಣ ದಾಖಲೆ ಮಾಡಿಸಿರುವ ಪ್ರಕರಣ ಬೇಲೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಬೇಲೂರು ತಾಲೂಕಿನ ಬಂಟೇನಹಳ್ಳಿ ಪಂಚಾಯತ್ ವ್ಯಾಪ್ತಿಯ ಮುದು ಗೆರೆ ಗ್ರಾಮದ ದಿವಂಗತ ಹುಲೀಗೌಡರ ಪತ್ನಿ ಪಾರ್ವತಮ್ಮ ಅವರ ಹೆಸರಿನಲ್ಲಿದ್ದ 32 ಗುಂಟೆ ಜಮೀನನ್ನು ತನ್ನದಾಗಿಸಿಕೊಳ್ಳುವ ಉದ್ದೇಶದಿಂದ ಇವರ ಮೈದುನನ ಮಗ ಮರಣ ದೃಢೀಕರಣ ಪತ್ರ ಸೃಷ್ಟಿಸಿದ್ದಾನೆ. ಪಾರ್ವತಮ್ಮ ಅವರಿಗೆ 5 ಜನ ಗಂಡುಮಕ್ಕಳು, ಇಬ್ಬರು ಹೆಣ್ಣು ಮಕ್ಕಳಿದ್ದು ಎಲ್ಲರಿಗೂ ಆಸ್ತಿ ವಿಭಾಗ ಮಾಡಿಕೊಟ್ಟಿದ್ದರು. ತಮ್ಮ ಜೀವನಾಂಶಕ್ಕೆಂದು 32 ಗುಂಟೆ ಜಮೀನನ್ನು ಇಟ್ಟು ಕೊಂಡಿದ್ದ ಪಾರ್ವತಮ್ಮ  ಬೇಕರಿ ಮಾಡಿಕೊಂಡು ಬೇರೆ ಊರಿನಲ್ಲಿ  ಮಕ್ಕಳ ಜೊತೆ ವಾಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಮೈದುನನ ಮಗನು ಪಾರ್ವತಮ್ಮ ರವರ ಮರಣ ದೃಢೀಕರಣ ಪತ್ರ ಪಡೆದಿರುವ ವಿಷಯ ತಿಳಿದು, ತಹಶೀಲ್ದಾ‌ರ್  ಕಚೇರಿಯಲ್ಲಿ ಪರಿಶೀಲಿಸಿದಾಗ ಎನ್.ವಿ.ನಟೇಶ್ ಎಂಬವರು ತಹಸೀಲ್ದಾರ್ ಆಗಿದ್ದ ಅವಧಿಯಲ್ಲಿ ಪಾರ್ವತಮ್ಮ ಮೃತಪಟ್ಟಿದ್ದಾರೆಂದು ಮರಣ ದೃಢೀಕರಣ ಪತ್ರವನ್ನು ಪಡೆದಿರುವುದು ಬೆಳಕಿಗೆ ಬಂದಿದೆ.

ಇದರಿಂದ ಆತಂಕಗೊಂಡ ಪಾರ್ವತಮ್ಮನ ಮಗ ಮಲ್ಲೇಶ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

Similar News