ಮೂಡಿಗೆರೆ | ಹಲ್ಲೆ ಪ್ರಕರಣಕ್ಕೆ ತಿರುವು; ಮಹಿಳೆಯ ಮನೆಗೆ ಅಕ್ರಮವಾಗಿ ಪ್ರವೇಶಿಸಿದ್ದ ಬಿಜೆಪಿ ಕಾರ್ಯಕರ್ತ

Update: 2023-05-26 16:15 GMT

ಚಿಕ್ಕಮಗಳೂರು, ಮೇ 26:  ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತನೋರ್ವನ ಮೇಲೆ ನಡೆದಿದ್ದ ಗುಂಪು ಹಲ್ಲೆ ಪ್ರಕರಣ ಇದೀಗ ತಿರುವು ಪಡೆದುಕೊಂಡಿದೆ.

'ಬೇರೆ ಧರ್ಮದ ಯುವತಿಯ ಜೊತೆ ಸ್ನೇಹ ಬೆಳೆಸಿದ ಕಾರಣಕ್ಕೆ ಬಿಜೆಪಿ ಕಾರ್ಯಕರ್ತ ಅಜಿತ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ' ಎಂದು ಕೆಲವು ಮಾಧ್ಯಮಗಳು ವರದಿ ಮಾಡಿತ್ತು. ಇದೀಗ ಮಹಿಳೆಯೊಬ್ಬರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮನೆಯ ಅಡುಗೆ ಮನೆಯ ಕಪಾಟಿನಲ್ಲಿ ಅವಿತುಕೊಂಡಿದ್ದಕ್ಕೆ ಸ್ಥಳೀಯರು ಆತನ ಮೇಲೆ ಹಲ್ಲೆ ನಡೆಸಿರುವ ಮಾಹಿತಿ ಬಹಿರಂಗವಾಗಿದೆ. 

ಘಟನೆ ಸಂಬಂಧ ಪೊಲೀಸರು ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಮೇಲೆ ದೂರು ದಾಖಲಿಸಿಕೊಂಡಿರುವುದಲ್ಲದೆ, ಮಹಿಳೆ ನೀಡಿದ ದೂರಿನ ಮೇರೆಗೆ ಯುವಕನ ವಿರುದ್ಧವೂ ಎಫ್‍ಐಆರ್ ದಾಖಲಿಸಿಕೊಂಡು ತನಿಖೆಕೈಗೊಂಡಿದ್ದಾರೆ.

ಬಣಕಲ್ ಪಟ್ಟಣದ ನಿವಾಸಿಯಾಗಿರುವ ಮಹಿಳೆಯ ಮನೆಗೆ ಶುಕ್ರವಾರ ಮುಂಜಾನೆ ಅಜಿತ್ ಎಂಬ ಅಕ್ರಮವಾಗಿ ಪ್ರವೇಶಿಸಿದ್ದು, ಮುಂಜಾನೆ ಮಹಿಳೆಯ ಮನೆಯೊಳಗೆ ಹೋಗಿದ್ದ ಯುವಕನನ್ನು ಕಂಡ ಸ್ಥಳೀಯರು ಕೂಗಾಡಿದ್ದಾರೆ. ಈ ವೇಳೆ ಸ್ಥಳದಲ್ಲಿ ಜಮಾವಣೆಗೊಂಡ ಅಕ್ಕಪಕ್ಕದ ನಿವಾಸಿಗಳು ಕಳ್ಳ ಇರಬಹುದು ಎಂದು ಭಾವಿಸಿ ಆತನಿಗಾಗಿ ಹುಡುಕಾಡಿದ್ದಾರೆ. ಇಡೀ ಮನೆ ಹುಡಕಾಡಿದರೂ ಆತನ ಸುಳಿವು ಸಿಗದಿದ್ದಾಗ ಅಡುಗೆ ಮನೆಯ ಕಪಾಟು ಪರಿಶೀಲಿಸಿದಾಗ ಅಜಿತ್ ಅಲ್ಲಿ ಅಡುಗಿ ಕುಳಿತಿದ್ದ ಎಂದು ತಿಳಿದು ಬಂದಿದೆ.

ಈ ವೇಳೆ ಸ್ಥಳದಲ್ಲಿದ್ದ ಸ್ಥಳೀಯರು ಆತನನ್ನು ಪ್ರಶ್ನಿಸಿದ್ದು, ಆತ ಶಂಕೆ ಬರುವ ರೀತಿಯಲ್ಲಿ ಮಾತನಾಡಿದ್ದರಿಂದ ಸ್ಥಳೀಯರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದು, ಹಲ್ಲೆಗೊಳಗಾದ ಯುವಕ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡ ನಂತರ ಹಲ್ಲೆ ಮಾಡಿದವರ ವಿರುದ್ಧ ದೂರು ದಾಖಲಿಸಿದ್ದಾನೆ.

ದೂರಿನ ಮೇರೆಗೆ ಬಣಕಲ್ ಪೊಲೀಸರು ಐದು ಮಂದಿ ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. 

ಎಸ್ಪಿ ಪ್ರತಿಕ್ರಿಯೆ ಏನು?

'ಬಣಕಲ್ ಪಟ್ಟಣದ ಇಂದಿರಾ ನಗರ ಬಡಾವಣೆಯಲ್ಲಿ ಶುಕ್ರವಾರ ಮುಂಜಾನೆ ಅಜಿತ್ ಪೂಜಾರಿ ಎಂಬಾತ ಮಹಿಳೆಯೊಬ್ಬರ ಮನೆಗೆ ಪ್ರವೇಶಿಸಿದ್ದ. ಇದನ್ನು ಕಂಡ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ಹಲ್ಲೆ ಮಾಡಿದವರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಮಹಿಳೆ ನೀಡಿದ ದೂರಿನ ಮೇರೆಗೆ ಯುವಕ ಅಜಿತ್ ಮೇಲೂ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ'

- ಉಮಾ ಪ್ರಶಾಂತ್, ಎಸ್ಪಿ- ಚಿಕ್ಕಮಗಳೂರು

---------------------------------------------------------------------------------

'ತನ್ನ ಮನೆಯ ಸಮೀಪದಲ್ಲಿ ಮನೆಯೊಂದರ ಬಳಿ ಮುಂಜಾನೆ 3-4 ಗಂಟೆಯ ಸಮಯದಲ್ಲಿ ಕಳ್ಳಕಳ್ಳ ಎಂದು ಕೂಗುತ್ತಿದ್ದರು. ಈ ವೇಳೆ ಸ್ಥಳೀಯರು ಗುಂಪಾಗಿ ಮಹಿಳೆಯೊಬ್ಬರ ಮನೆಯ ಬಳಿ ಕಳ್ಳನಿಗಾಗಿ ಹುಡುಕಾಟ ಆರಂಭಿಸಿದ್ದೆವು. ಆತ ಎಲ್ಲೂ ಕಾಣದಿದ್ದಾಗ ಮನೆಯ ಅಡುಗೆ ಮನೆಯ ಕಾಪಾಟಿನಲ್ಲಿ ಯುವಕನೊಬ್ಬ ಅವಿತುಕೊಂಡಿದ್ದ. ಆತ ಕೈಯಲ್ಲಿ ಚಾಕು ಹಿಡಿದು ನಮಗೆ ಬೆದರಿಸಿದ್ದ. ಈ ವೇಳೆ ಕಪಾಟಿನಿಂದ ಕೆಳಗಿಳಿಯ ಸಂದರ್ಭದಲ್ಲಿ ಕೆಳಗೆ ಬಿದ್ದು ಆತನ ಎದೆ, ಮುಖಕ್ಕೆ ಪೆಟ್ಟಾಗಿದೆ. ಸ್ಥಳದಲ್ಲಿದ್ದವರು ಯಾರೂ ಹಲ್ಲೆ ಮಾಡಿಲ್ಲ. ಆತ ಈ ಹಿಂದೆಯೂ ಹುಡುಗಿಯರನ್ನು ಚುಡಾಯಿಸಿದ ಘಟನೆಗಳು ನಡೆದಿದ್ದು, ಪರಿಚಯದವನಾಗಿದ್ದರಿಂದ ಹಲವು ಬಾರಿ ಬುದ್ಧಿ ಹೇಳಿದ್ದೆವು''

- ಆಸೀಫ್, ಸ್ಥಳೀಯ ನಿವಾಸಿ
 

Similar News