ಸಿದ್ದರಾಮಯ್ಯ ಸಂಪುಟದ ನೂತನ ಸಚಿವರ ಕಿರು ಪರಿಚಯ ಇಲ್ಲಿದೆ...

Update: 2023-05-27 05:00 GMT

ಬೆಂಗಳೂರು:  ಮುಖ್ಯಮಂತ್ರಿ ಸಿದ್ದರಾಮಯ್ಯ  ಸಂಪುಟಕ್ಕೆ ಸೇರುವ 24 ಸಚಿವರ ಪಟ್ಟಿ ಅಂತಿಮಗೊಂಡಿದ್ದು, ನೂತನ ಸಚಿವರ ಪಟ್ಟಿ ಮುಖ್ಯಮಂತ್ರಿಗಳ ಕಚೇರಿಯಿಂದ ರಾಜಭವನಕ್ಕೆ ತಲುಪಿದೆ.

ನಾಳೆ (ಮೇ 27) ರಂದು ರಾಜಭವನದ ಗಾಜಿನಮನೆಯಲ್ಲಿ  ಬೆಳಗ್ಗೆ 11:30 ನಿಮಿಷಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. 

ನೂತನ ಸಚಿವರ ಪರಿಚಯ ಇಲ್ಲಿದೆ....

ಡಾ.ಎಚ್.ಸಿ.ಮಹದೇವಪ್ಪ: ಮೈಸೂರು ಜಿಲ್ಲೆಯ ಟಿ.ನರಸೀಪುರ ಕ್ಷೇತ್ರದ ಶಾಸಕರು. ಲೋಕೋಪಯೋಗಿ ಮತ್ತು ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ದಲಿತ-ಪ್ರಗತಿಪರ ಚಳವಳಿಗಳಲ್ಲಿ ಗುರುತಿಸಿಕೊಂಡಿರುವ ಡಾ.ಮಹದೇವಪ್ಪ, ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮೈಗೂಡಿಸಿರುವ ಅಪರೂಪದ ಮುತ್ಸದ್ಧಿ ರಾಜಕೀಯ ನಾಯಕರು.

---------------------------------------------

ಎಚ್.ಕೆ.ಪಾಟೀಲ್: ಗದಗ ಜಿಲ್ಲೆಯ ಗದಗ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿರುವ ಎಚ್.ಕೆ. ಪಾಟೀಲ್ ಅವರು, ಈ ಹಿಂದೆ ಎಂ.ವೀರಪ್ಪಮೊಯ್ಲಿ, ಎಸ್ಸೆಂ ಕೃಷ್ಣ, ಎನ್.ಧರ್ಮಸಿಂಗ್ ಹಾಗೂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿ ಇಲಾಖೆಯಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಿದ್ದಾರೆ.

---------------------------------------------

ಕೃಷ್ಣ ಭೈರೇಗೌಡ: ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರದ ಶಾಸಕರಾಗಿರುವ ಕೃಷ್ಣ ಬೈರೇಗೌಡ ಅವರು, ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಸಚಿವರಾಗಿ ಕೆಲಸ ಮಾಡಿದ್ದರು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಕಾನೂನು ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.

---------------------------------------------

ದಿನೇಶ್ ಗುಂಡೂರಾವ್: ಬೆಂಗಳೂರಿನ ಗಾಂಧಿನಗರ ಕ್ಷೇತ್ರದ ಶಾಸಕರಾಗಿರುವ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿ ಕೆಲಸ ಮಾಡಿದ್ದು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದ್ದರು.

---------------------------------------------

ಸಂತೋಷ್ ಲಾಡ್: 2004ರಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ಅವರು ಸಚಿವರಾಗಿದ್ದರು. 2008ರಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾಯಿತರಾದರು. 2013ರಲ್ಲಿ ಸಿದ್ದರಾಮಯ್ಯ ಸರಕಾರದಲ್ಲಿ ಸಚಿವರಾಗಿಯೂ ಕೆಲಸ ಮಾಡಿದರು. 2018ರ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅವರು, ಇದೀಗ ಪುನಃ ಕಲಘಟಗಿಯಿಂದ ಆಯ್ಕೆಯಾಗಿ ಮೂರನೆ ಬಾರಿ ಸಚಿವರಾಗುತ್ತಿದ್ದಾರೆ.

---------------------------------------------

ಲಕ್ಷ್ಮಿ ಹೆಬ್ಬಾಳ್ಕರ್: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ 2018ರಲ್ಲಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದ ಲಕ್ಷ್ಮಿ ಹೆಬ್ಬಾಳ್ಕರ್, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಮೈಸೂರು ಮಿನರಲ್ಸ್‍ನ ಅಧ್ಯಕ್ಷೆಯಾಗಿದ್ದರು. 2023ರಲ್ಲಿ ಎರಡನೆ ಬಾರಿ ಶಾಸಕಿಯಾಗಿ ಆಯ್ಕೆಯಾಗಿರುವ ಅವರು, ಇದೀಗ ಮೊದಲ ಬಾರಿ ಸಚಿವೆಯಾಗುತ್ತಿದ್ದಾರೆ.

---------------------------------------------

ಡಾ.ಎಂ.ಸಿ.ಸುಧಾಕರ್: ಚಿಂತಾಮಣಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ 2004, 2008ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. 2013 ಹಾಗೂ 2018ರಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. 2023ರಲ್ಲಿ ಮೂರನೆ ಬಾರಿ ಶಾಸಕರಾಗಿರುವ ಅವರು, ಮೊದಲ ಬಾರಿ ಸಚಿವರಾಗುತ್ತಿದ್ದಾರೆ.

................

ಡಾ.ಶರಣಪ್ರಕಾಶ್ ಪಾಟೀಲ್: ಸೇಡಂ ವಿಧಾನಸಭಾ ಕ್ಷೇತ್ರದಿಂದ 2004, 2008 ಮತ್ತು 2013ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, 2013-18ರವರೆಗೆ ಸಿದ್ದರಾಮಯ್ಯ ಸರಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 2018ರಲ್ಲಿ ಪರಾಭವಗೊಂಡಿದ್ದರು. ಇದೀಗ ನಾಲ್ಕನೆ ಬಾರಿ ಶಾಸಕರಾಗಿರುವ ಶರಣ ಪ್ರಕಾಶ್ ಪಾಟೀಲ್, ಎರಡನೆ ಬಾರಿಗೆ ಸಚಿವರಾಗುತ್ತಿದ್ದಾರೆ.

.............

ಈಶ್ವರ್ ಖಂಡ್ರೆ: ಬೀದರ್ ಜಿಲ್ಲೆಯ ಭಾಲ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಈಶ್ವರ್ ಖಂಡ್ರೆ ಅವರು ಮೂರನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. 2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಮತ್ತು ಸಾರ್ವಜನಿಕ ಉದ್ದಿಮೆಗಳ ರಾಜ್ಯ ಸಚಿವರಾಗಿ ಕಾರ್ಯ ಮಾಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿಯೂ ಕಾರ್ಯನಿರ್ವಹಣೆ ಮಾಡಿದ್ದಾರೆ.

..................

ಆರ್.ಬಿ.ತಿಮ್ಮಾಪುರ: ವಿಜಯಪುರ ಮುಧೋಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು, ಎಸ್.ಎಂ.ಕೃಷ್ಣ ಅವರ ಸರಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆನಂತರ, ಸಿದ್ದರಾಮಯ್ಯ ಸರಕಾರದಲ್ಲಿಯೂ 2013-2018ರ ವರೆಗೂ ಸಚಿವರಾಗಿದ್ದರು.

................

ರಹೀಂಖಾನ್: ಬೀದರ್ ಉತ್ತರ ಕ್ಷೇತ್ರದ ಶಾಸಕ ರಹೀಂ ಖಾನ್ ಅವರು ಸತತ ಮೂರನೇ ಬಾರಿಗೆ ಜಯಗೊಳಿಸಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರ ಸರಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದು, ಅಲ್ಪಸಂಖ್ಯಾತ ಸಮುದಾಯದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

.................

ಶಿವರಾಜ್ ತಂಗಡಗಿ: ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿರು ಶಿವರಾಜ್ ತಂಗಡಗಿ ಅವರು, ಈ ಹಿಂದೆ 2008ರ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಖಾತೆ ಸಚಿವರಾಗಿದ್ದರು. ಆ ಬಳಿಕ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಇದೀಗ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

.............

ಮಧು ಬಂಗಾರಪ್ಪ: ಶಿವಮೊಗ್ಗ ಜಿಲ್ಲೆಯ ಸೊರಬ ವಿಧಾನಸಭಾ ಕ್ಷೇತ್ರದಿಂದ 2013ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದರು. 2018ರಲ್ಲಿ ತಮ್ಮ ಸಹೋದರ ಕುಮಾರ ಬಂಗಾರಪ್ಪ ವಿರುದ್ಧ ಪರಾಭವಗೊಂಡಿದ್ದರು. 2023ರಲ್ಲಿ ಎರಡನೆ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಮೊದಲ ಬಾರಿ ಸಚಿವರಾಗುತ್ತಿದ್ದಾರೆ.

...................

ಎನ್.ಎಸ್.ಬೋಸರಾಜು: ಎಐಸಿಸಿ ಕಾರ್ಯದರ್ಶಿಯಾಗಿರುವ ಎನ್.ಎಸ್.ಬೋಸರಾಜು ಎರಡು ಬಾರಿ ಮಾನ್ವಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಒಮ್ಮೆ ವಿಧಾನ ಪರಿಷತ್ ಸದಸ್ಯರಾಗಿದ್ದರು. ಇದೇ ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

.....................

ಕೆ.ಎನ್.ರಾಜಣ್ಣ: ತುಮಕೂರು ಜಿಲ್ಲೆಯ ಮಧುಗಿರಿ ಕ್ಷೇತ್ರದಿಂದ ಆಯ್ಕೆಯಾಗಿರುವ ಹಿರಿಯ ಶಾಸಕ ಕೆ.ಎನ್.ರಾಜಣ್ಣ ಇದೇ ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

..............

ಬಿ.ನಾಗೇಂದ್ರ: ಬಳ್ಳಾರಿ ಜಿಲ್ಲೆಯ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಿ.ನಾಗೇಂದ್ರ ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ನೇತೃತ್ವದ ಸಂಪುಟಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

............

ಶಿವಾನಂದ ಪಾಟೀಲ್: ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಕ್ಷೇತ್ರದ ಶಾಸಕರಾಗಿರುವ ಶಿವಾನಂದ ಪಾಟೀಲ್ ಈ ಹಿಂದೆ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಆರೋಗ್ಯ ಸಚಿವರಾಗಿ ಕೆಲಸ ಮಾಡಿದ್ದು, ಇದೀಗ ಎರಡನೇ ಬಾರಿಗೆ ಸಂಪುಟಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

...............

ಕೆ.ವೆಂಕಟೇಶ್: ಮೈಸೂರು ಜಿಲ್ಲೆಯ ಪಿರಿಯಪಟ್ಟಣ ಕ್ಷೇತ್ರದ ಹಿರಿಯ ಶಾಸಕರಾಗಿರುವ ಕೆ.ವೆಂಕಟೇಶ್ ಸಿದ್ದರಾಮಯ್ಯರ ಆಪ್ತರಾಗಿದ್ದು ಇದೇ ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.

.............

ಚಲುವರಾಯಸ್ವಾಮಿ: ಮಂಡ್ಯ ಜಿಲ್ಲೆ ನಾಗಮಂಗಲ ಕ್ಷೇತ್ರದ ಶಾಸಕರಾಗಿರುವ ಚಲುವರಾಯಸ್ವಾಮಿ ಈ ಹಿಂದೆ ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ಸಾರಿಗೆ ಸಚಿವರಾಗಿದ್ದರು. ಇದೀಗ ಕಾಂಗ್ರೆಸ್ ಸರಕಾರದಲ್ಲಿ ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ಸ್ವೀಕರಿಸುತ್ತಿದ್ದಾರೆ.

.........

ಎಸ್.ಎಸ್.ಮಲ್ಲಿಕಾರ್ಜುನ್: ದಾವಣಗೆರೆ ಜಿಲ್ಲೆಯ ದಾವಣಗೆರೆ ಉತ್ತರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಎಸ್.ಎಸ್.ಮಲ್ಲಿಕಾರ್ಜುನ್ ಈ ಹಿಂದೆ ಸಿದ್ದರಾಮಯ್ಯ ಸರಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇದೀಗ ಎರಡನೇ ಅವಧಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Similar News