ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

Update: 2023-05-27 14:15 GMT

ಬೆಂಗಳೂರು, ಮೇ 27: ಭಾರತದಲ್ಲಿ ಶಿಕ್ಷಕರನ್ನು ದೇವರ ಸ್ಥಾನದಲ್ಲಿ ಕಾಣಲಾಗುತ್ತದೆ. ಹೀಗಿದ್ದಾಗಲೂ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುವುದು ಘೋರ ಅಪರಾಧವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಹೈಕೋರ್ಟ್, ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಶಿಕ್ಷಕನೊಬ್ಬನಿಗೆ ಜಾಮೀನು ನೀಡಲು ನಿರಾಕರಿಸಿದೆ.

ಪೊಕ್ಸೊ ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಶಿಕ್ಷಕ ಸಿ.ಮಂಜುನಾಥ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.

ಶಿಕ್ಷಕರಿಗೆ ಸಮಾಜದಲ್ಲಿ ಗೌರವವಿದೆ. ಅದನ್ನು ಕಂಡುಕೊಳ್ಳದ ಅವರು, ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಿದ್ದಾರೆ.ಅರ್ಜಿದಾರರ ನಡತೆಯಿಂದ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುವಂತಾಗಿದೆ.  ಶಿಕ್ಷಕರಿಗೆ ದೇವರಿಗೆ ನೀಡುವ ಗೌರವ ನೀಡಲಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.

ಅರ್ಜಿದಾರರು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬೊರಗುಂಟೆ ಗ್ರಾಮದಲ್ಲಿ 7 ವರ್ಷಗಳ ಕಾಲ ಸಹಾಯಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ನಾಲ್ಕರಿಂದ ಆರನೆ ತರಗತಿವರೆಗಿನ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಎದುರಿಸುತ್ತಿದ್ದರು. ಈ ಸಂಬಂಧದ ಗ್ರಾಮಸ್ಥರು ಮಧುಗಿರಿಯ ಕ್ಷೇತ್ರ ಶಿಕ್ಷಣಾಧಿಕಾರಿಗೆ(ಬಿಇಒ) ದೂರು ನೀಡಿದ್ದರು. ಬಿಇಒ ಅವರು ಬೊಡವನಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. 

Similar News