ದಾವಣಗೆರೆ: ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಮೇಲ್ಸೇತುವೆಯಿಂದ ಹಾರಿ ಆರ್ ಟಿಐ ಕಾರ್ಯಕರ್ತ ಸಾವು

Update: 2023-05-28 06:01 GMT

ದಾವಣಗೆರೆ: ಭೂಮಿ ಸಂಬಂಧಿತ ನಕಲಿ ದಾಖಲೆ ಸೃಷ್ಟಿಸಿದ ಆರೋಪ ಎದುರಿಸುತ್ತಿದ್ದ ಆರ್ ಟಿ ಐ ಕಾರ್ಯಕರ್ತ ಹರೀಶ್ ಹಳ್ಳಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ತೋಳಹುಣಿಸೆ ಗ್ರಾಮದ ಮೇಲ್ಸೇತುವೆಯಿಂದ ಹಾರಿ ಸಾವಿಗೀಡಾದ ಘಟನೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ.

ಹರೀಶ್ ಹಳ್ಳಿ ಅವರ ಮೇಲೆ ದಾಖಲಾಗಿದ್ದ ದೂರಿನ‌ ವಿಚಾರಣೆಗಾಗಿ ಠಾಣೆಗೆ ಕರೆದೊಯ್ಯುವ ವೇಳೆ ತೋಳಹುಣಸೆ ಬ್ರಿಡ್ಜ್ ಬಳಿ ಜೀಪಿನಿಂದ ತಪ್ಪಿಸಿಕೊಂಡು ಮೇಲ್ಸೇತುವೆಯಿಂದ ಸರ್ವೀಸ್ ರಸ್ತೆಗೆ ಹಾರಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ  ಚಿಕಿತ್ಸೆ ಫಲಕಾರಿಯಾಗದೆ  ಮೃತಪಟ್ಟಿದ್ದಾರೆ ಎಂದು ಎಸ್ ಪಿ ಡಾ. ಕೆ.ಅರುಣ್ ತಿಳಿಸಿದ್ದಾರೆ.

ದಾವಣಗೆರೆ ಗಾಂಧಿನಗರ ಪೊಲೀಸ್ ಠಾಣೆಯ ಪಿಎಸ್ ಐ  ಕೃಷ್ಣಪ್ಪ ಪಿಸಿ ದೇವರಾಜ್ ಹಾಗೂ ವಾಹನ ಚಾಲಕ ಇರ್ಷಾದ್ ಅವರು ನನ್ನ ಗಂಡ ಹರೀಶ್ ಅವರನ್ನು ಕಾಕನೂರಿನಿಂದ ರಾತ್ರಿ  1ಗಂಟೆಗೆ  ಬಲವಂತದಿಂದ ಕರೆದುಕೊಂಡು ಹೋಗಿ ಕೊಲೆ‌ಮಾಡಿದ್ದಾರೆ ಎಂದು ಹರೀಶ್ ಪತ್ನಿ ಕೆ.ಆರ್. ಲತಾ ಪೋಲೀಸರ‌ ಮೇಲೆ ದೂರು ದಾಖಲಿಸಿದ್ದಾರೆ.

ಬೆಳಿಗ್ಗೆ 4.30ಕ್ಕೆ ಫೋನ್ ಮಾಡಿ ನಿಮ್ಮ ಗಂಡನನ್ನು ಆಸ್ಪತ್ರೆಗೆ ಸೇರಿಸಿದ್ದೇವೆ.  ಸೀರಿಯಸ್ ಆಗಿದೆ ಎಂದು ಪೋಲೀಸರು ಹೇಳಿದ್ದರು. ನನ್ನ ಗಂಡನ ಸಾವಿಗೆ ಪಿಎಸ್ ಐ ಕೃಷ್ಣಪ್ಪ, ಪಿಸಿ ದೇವರಾಜ್, ಚಾಲಕ ಇರ್ಷದ್, ಬಾಬುರಾವ್ ಅವರೇ ನೇರ ಕಾರಣ ಎಂದು ಲತಾ ದೂರಿನಲ್ಲಿ ತಿಳಿಸಿದ್ದಾರೆ.

ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್, ಘಟನೆಗೆ ಸಂಬಂಧಿಸಿದಂತೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನ್ಯಾಯಾಧೀಶರ ಸಮ್ಮುಖದಲ್ಲಿ ಮರಣೊತ್ತರ ಪರೀಕ್ಷೆ  ನಡೆಸಲಾಗುತ್ತದೆ. ಪೋಷಕರ ಒತ್ತಾಯದ ಮೇರೆಗೆ ಸಿಐಡಿ ತನಿಖೆಗೂ ವಹಿಸಲು ಮುಂದಾಗುತ್ತೇವೆ. ಪೊಲೀಸ್ ವಿರುದ್ದ ಇಲಾಖಾ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Similar News