ನನ್ನೊಬ್ಬನನ್ನು ಸೋಲಿಸಲು ಹೋಗಿ ಸ್ವತಃ ಬಿಜೆಪಿಯೇ ಸೋತಿದೆ: ಜಗದೀಶ್ ಶೆಟ್ಟರ್

"ವಿರೋಧ ಪಕ್ಷದ ನಾಯಕನನ್ನು ಆರಿಸಲು ಬಿಜೆಪಿಯಲ್ಲಿ ಯಾರೂ ಇಲ್ಲ"

Update: 2023-05-28 09:53 GMT

ಹುಬ್ಬಳ್ಳಿ: ನನ್ನೊಬ್ಬನನ್ನು ಸೋಲಿಸಲು ಹೋಗಿ ಸ್ವತಃ ಬಿಜೆಪಿಯೇ ಸೋತಿದೆ ಎಂದು ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಷರತ್ತು ವಿಧಿಸಿ ಕಾಂಗ್ರೆಸ್ ಸೇರಿರಲಿಲ್ಲ. ಆದರೆ ನಾನು ಮಾಡಿದ ಸಂಘಟನೆ ನೋಡಿ ಹಲವಾರು ಜನ ನನಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದರು. ಆದರೆ ಸದ್ಯ ಒತ್ತಡದ ಪರಿಸ್ಥಿತಿಯಿದೆ. ಹಲವು ಕಾರಣದಿಂದ ಅದು ಆಗಿಲ್ಲ. ಮುಂದೆ ಒಳ್ಳೆಯ ಸ್ಥಾನ ನೀಡುವ ಭರವಸೆಯಿದೆ. ಇನ್ನೂ ಹಲವಾರು ಸ್ಥಾನಮಾನಗಳಿವೆ. ಯಾವುದೇ ಸ್ಥಾನವನ್ನು ಕೊಟ್ಟರೂ ನಿಭಾಯಿಸಿಕೊಂಡು ಹೋಗುತ್ತೇನೆ. ಈಗಿನ ಸಂಪುಟ ರಚನೆಯ ನಂತರ ಕೂತು ಚರ್ಚಿಸುವ ಬಗ್ಗೆ ಮಾತಾಗಿದೆ ಎಂದರು

ವೈಯಕ್ತಿಕವಾಗಿ ನಾನು ಯಾವುದೇ ಆಸೆ ವ್ಯಕ್ತಪಡಿಸಲಿಲ್ಲ. ನನ್ನೊಬ್ಬನನ್ನು ಸೋಲಿಸಲು ಹೋಗಿ ಬಿಜೆಪಿ ತಾನೇ ಸೋತಿದೆ. ಕಾಂಗ್ರೆಸ್‌ಗೆ ಜನ ಬೆಂಬಲ ನೀಡಿದ್ದಾರೆ. ಯಾವ ರೀತಿ ಮುಂದೆ ಹೋಗಬೇಕು ಎಂಬ ಬಗ್ಗೆ ಕಾಂಗ್ರೆಸ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು. 

ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಯಾವುದೇ ಚರ್ಚೆಗಳು ನಡೆದಿಲ್ಲ. ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷವಿದೆ. ಕಾಂಗ್ರೆಸ್ ಯಾವ ಜವಾಬ್ದಾರಿ ನೀಡುತ್ತದೆ ಅದನ್ನು ನಿಭಾಯಿಸುತ್ತೇನೆ. ಉತ್ತರ ಕರ್ನಾಟಕ ಭಾಗದ ನಾಯಕರಿಗೆ ಕೆಲವು ಪ್ರಮುಖ ಸ್ಥಾನ ಸಿಕ್ಕಿದೆ. ಮುಂದಿನ ಕ್ಯಾಬಿನೆಟ್‌ನಲ್ಲಿ ಒಂದು ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಗ್ಯಾರಂಟಿ ಅನುಷ್ಠಾನ ಮಾಡಲು ಸ್ವಲ್ಪ ಸಮಯ ಬೇಕಾಗುತ್ತದೆ. ಪ್ರತಿಪಕ್ಷ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಹೊಸ ಸರ್ಕಾರ ಬಂದಿದೆ. ರಾಜಕಾರಣದಲ್ಲಿ ತಾಳ್ಮೆ ಬೇಕಾಗುತ್ತದೆ. ಎಂಪಿ ಚುನಾವಣೆಗೆ ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಮಾಲೋಚನೆ ನಡೆದಿದೆ. ಸೋಲಿಗೆ ಕಾರಣವನ್ನು ಬಹಿರಂಗವಾಗಿ ಚರ್ಚಿಸುವುದಿಲ್ಲ. ಲಕ್ಷ್ಮಣ ಸವದಿ ಹಾಗೂ ನನಗೆ ಸಚಿವ ಸ್ಥಾನ ಸಿಗಬೇಕಿತ್ತು, ಆದರೆ ಆಗಲಿಲ್ಲ ಎಂದರು.

ವಿರೋಧ ಪಕ್ಷದ ನಾಯಕನನ್ನು ಆರಿಸಲು ಬಿಜೆಪಿಯಲ್ಲಿ ಯಾರೂ ಇಲ್ಲ. ರಾಷ್ಟ್ರೀಯ ಪಕ್ಷಕ್ಕೆ ಇಂತಹ ಪರಿಸ್ಥಿತಿ ಬರಬಾರದಿತ್ತು. ರಾಜ್ಯದಲ್ಲಿ ಬಿಜೆಪಿಯನ್ನು ಈ ಪರಿಸ್ಥಿತಿಗೆ ತರಲು ಕಾರಣವಾದವರು ಈಗ ಎಲ್ಲಿದ್ದಾರೆ? ಇನ್ನೂ ನನ್ನ ಪ್ರಶ್ನೆಗೆ ಯಾರೂ ಉತ್ತರ ಕೊಟ್ಟಿಲ್ಲ. ಅವರೆಲ್ಲರೂ ಈಗ ನಾಪತ್ತೆಯಾಗಿದ್ದಾರೆ ಎಂದು ಪರೋಕ್ಷವಾಗಿ ಬಿಎಲ್ ಸಂತೋಷ್‌ ರನ್ನು ಟೀಕಿಸಿದರು.

Similar News