ಸಚಿವ ಸ್ಥಾನ ಸಿಗದ ಹಿರಿಯ ಶಾಸಕರಿಗೆ ಬೇರೆ ಹುದ್ದೆ ನೀಡಲು ಕ್ರಮ: ಸತೀಶ್ ಜಾರಕಿಹೊಳಿ

Update: 2023-05-28 12:30 GMT

ಬೆಳಗಾವಿ, ಮೇ 28: ‘ಜಿಲ್ಲೆಯಿಂದ ಎರಡು ಅಥವಾ ಮೂರು ಬಾರಿ ಆಯ್ಕೆಯಾಗಿರುವ ಹಿರಿಯ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡಲು ಸಾಧ್ಯವಾಗಿಲ್ಲ. ಅಂತಹವರಿಗೆ ಬೇರೆ ಹುದ್ದೆಗಳನ್ನು ನೀಡಲಾಗುವುದು’ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ರವಿವಾರ ನೂತ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅದ್ದರೂಯಾಗಿ ಸ್ವಾಗತಿಸಿದ ಕಾಂಗ್ರೆಸ್ ಕಾರ್ಯಕರ್ತರು, ಉಭಯರ ಮೇಲೆ ಪುಷ್ಪಾ ವೃಷ್ಠಿ ಗೈದು ಸಂಭ್ರಮಿಸಿದರು. 

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, ‘ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಅಸಮಾಧಾನ ಎಲ್ಲ ಕಡೆ ಇದೆ ಅಥವಾ ಇಲ್ಲ ಎಂದು ಹೇಳಲು ಆಗದು. ಆದರೆ, ಯಾರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಅವರೆಲ್ಲಾ ಆರೋಪ ಮಾಡುತ್ತಿದ್ದಾರೆ. ಅದು ಸ್ವಾಭಾವಿಕ ಮತ್ತು ಸಹಜ. ಅಂಥವರಿಗೆ ಬೇರೆ-ಬೇರೆ ಹುದ್ದೆ ನೀಡಲಾಗುವುದು ಎಂದು ಭರವಸೆ ನೀಡಿದರು.

‘ಸಚಿವ ಸ್ಥಾನ ಸಿಗದೇ ಬೇಸರಗೊಂಡ ಶಾಸಕರನ್ನು ವರಿಷ್ಠರು ಕರೆಸಿ ಮಾತನಾಡುತ್ತಾರೆ. ಈಗಾಗಲೇ ಸಂಪುಟ ವಿಸ್ತರಣೆ ಆಗಿದೆ. ಸರಕಾರ ಟೇಕಫ್ ಆಗಿಲ್ಲ ಎಂದು ವಿಪಕ್ಷಗಳು ಹೇಳುತ್ತವೆ. ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ನಮಗೆ ಅವಕಾಶ ಕೊಡಬೇಕು’ ಎಂದು ಸತೀಶ ಜಾರಕಿಹೊಳಿ ಮನವಿ ಮಾಡಿದರು.

ಖಾತೆ ಅಂತಿಮ: ಯಾರೇ ಇದ್ದರೂ ರಾಜ್ಯದಲ್ಲಿ ಕಾಂಗ್ರೆಸ್‍ನವರೇ ಮುಖ್ಯಮಂತ್ರಿ ಆಗಿರುತ್ತಾರೆ. ವರಿಷ್ಠರ ಮಟ್ಟದಲ್ಲಿ ಸಿಎಂ ಬದಲಾವಣೆ ಸಂಬಂಧ ಯಾವ ರೀತಿ ಮಾತುಕತೆ ಆಗಿದೆ ಎಂಬುದು ಗೊತ್ತಿಲ್ಲ ಎಂದು ಸ್ಪಷ್ಟಣೆ ನೀಡಿದ ಅವರು, ‘ಸಚಿವರಿಗೆ ಖಾತೆ ಹಂಚಿಕೆ ಈಗಾಗಲೇ ಅಂತಿಮವಾಗಿದ್ದು, ಈಗಾಗಲೇ ಬಿಡುಗಡೆ ಆಗಿರುವ ಪಟ್ಟಿಯೇ ಅಂತಿಮ. ರಾಜ್ಯಪಾಲರ ಅಂಕಿತ ಹಾಕಬೇಕಿದೆ ಅಷ್ಟೇ ಎಂದು ತಿಳಿಸಿದರು.

‘ಬಿಜೆಪಿ ಸರಕಾರದ ಅವಧಿಯಲ್ಲಿ ಜಾರಿಗೊಳಿಸಿರುವ ಯೋಜನೆಗಳು ಅವಶ್ಯಕ ಹಾಗೂ ಜನಪರವಾಗಿದ್ದರೆ ಮುಂದುವರಿಸುತ್ತೇವೆ. ಅನವಶ್ಯಕ ಯೋಜನೆಗಳು ಇದ್ದರೆ ಅವುಗಳನ್ನು ಬಂದ್ ಮಾಡುತ್ತೇವೆ’ ಎಂದು ಸತೀಶ್ ಜಾರಕಿಹೊಳಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಇದೇ ವೇಳೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ‘ಬಜರಂಗದಳ ನಿಷೇಧದ ಬಗ್ಗೆ ನಮಗೆ ಯಾವುದೇ ತರಾತುರಿ ಇಲ್ಲ. ಸಂವಿಧಾ ಬಾಹಿರ ಕೃತ್ಯಗಳಲ್ಲಿ ತೊಡಗುವ ಸಂಘಟನೆಗಳನ್ನು ನಿಷೇಧಿಸುತ್ತೇವೆಂದು ಹೇಳಿದ್ದೇವೆ. ಆರೆಸೆಸ್ಸ ನಿಷೇಧಿಸುತ್ತೇವೆಂದು ಎಲ್ಲಿಯೂ ಹೇಳಿಲ್ಲ ಎಂದು ವಿವರಣೆ ನೀಡಿದರು.

‘ಬೆಳಗಾವಿ ಜಿಲ್ಲೆಯ ಹಿರಿಯ ಮುಖಂಡರಾದ ಸತೀಶ ಜಾರಕಿಹೊಳಿ ಅವರು ಕೇವಲ ಉಪಮುಖ್ಯಮಂತ್ರಿ ಮಾತ್ರವಲ್ಲ, ಅವರು ರಾಜ್ಯದ ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆ ಅವರಿಗಿದೆ. ಅದಕ್ಕೆ ಕಾಲ ಕೂಡಿ ಬರಬೇಕು, ಇಂದಲ್ಲ ನಾಳೆ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ನುಡಿದರು.

‘ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಖಾತೆ ಇನ್ನೂ ನನಗೆ ಅಧಿಕೃತವಾಗಿ ಹಂಚಿಕೆ ಆಗಬೇಕು. ಇಲಾಖಾವಾರು ಅಧಿಕಾರ ಸಭೆ ಮಾಡಿದ ಬಳಿಕ ಅಂಗನವಾಡಿ ಕಾರ್ಯಕರ್ತೆಯರು ಗೌರವಧನ ಹೆಚ್ಚಳವೂ ಸೇರಿದಂತೆ ಪಕ್ಷದಿಂದ ನೀಡಿರುವ ಭರವಸೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇವೆ. ರಾಜ್ಯದ ಜನ ಮೆಚ್ಚುವ ಹಾಗೆ, ಸರಕಾರಕ್ಕೆ ಒಳ್ಳೆಯ ಹೆಸರು ಬರುವ ಹಾಗೆ, ನನಗೆ ಕೊಟ್ಟಂತ ಇಲಾಖೆ ನಡೆಸುತ್ತೇನೆ. ಭ್ರಷ್ಟಾಚಾರ ಮುಕ್ತ ಅಧಿಕಾರ ನಮ್ಮ ಆದ್ಯತೆ’

-ಲಕ್ಷ್ಮಿ ಹೆಬ್ಬಾಳ್ಕರ್ ಸಚಿವೆ

Similar News