ತರಿಕೇರೆ ಮಾಜಿ ಶಾಸಕರ ಮನೆಯಲ್ಲಿ ದರೋಡೆ ಪ್ರಕರಣ: ಮತ್ತೆ ನಾಲ್ವರ ಬಂಧನ

Update: 2023-05-28 13:47 GMT

ಚಿಕ್ಕಮಗಳೂರು, ಮೇ 28: ಕಳೆದ ಮೇ 6ರಂದು ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಿರಗನಹಳ್ಳಿ ಗ್ರಾಮದಲ್ಲಿರುವ ಮಾಜಿ ಶಾಸಕ ಎಂ.ಎಸ್.ನಾಗರಾಜ್ ಅವರ ತೋಟದ ಮನೆಯಲ್ಲಿ ನಡೆದ ದರೋಡೆ ಪ್ರಕರಣದ ಆರೋಪಿಗಳ ಪೈಕಿ ಪೊಲೀಸರು ಮತ್ತೆ ನಾಲ್ಕು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭದ್ರಾವತಿ ಮೂಲದವರಾದ ನಿತಿನ್ ಎಸ್ ಮೂರ್ತಿ, ವೆಂಕಟೇಶ್ ಅಲಿಯಾಸ್ ವೆಂಕಿ, ಕಾರ್ತಿಕ್ ಎಂ.ಎಸ್, ಮಹೇಶ್ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳಿಂದ 27ಗ್ರಾಂ ಚಿನ್ನದ ಬಳೆ ಹಾಗೂ ಕೃತ್ಯಕ್ಕೆ ಬಳಸಿದ್ದ ಮಹೀಂದ್ರ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಳೆದ ಮೇ 6ರಂದು ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಶಿರಗನಹಳ್ಳಿಯಲ್ಲಿರುವ ಮಾಜಿ ಶಾಸಕ ಎಂ.ಎಸ್.ನಾಗರಾಜ್ ಅವರ ತೋಟದ ಮನೆಗೆ ನುಗ್ಗಿದ್ದ 15ರಿಂದ 20ಮಂದಿಯ ಗುಂಪು, ಮನೆಯಲ್ಲಿದ್ದ ಮಾಜಿ ಶಾಸಕ ನಾಗರಾಜ್ ಸೇರಿದಂತೆ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿ, ಮಾರಕಾಸ್ತ್ರಗಳನ್ನು ತೋರಿಸಿ ಮನೆಯಲ್ಲಿದ್ದ ಸುಮಾರು 43,33,500 ಲಕ್ಷ ರೂ. ಮೌಲ್ಯದ 963 ಗ್ರಾಂ ಚಿನ್ನಾಭರಣ ಹಾಗೂ 61 ಸಾವಿರ ರೂ. ನಗದು ದರೋಡೆ ಮಾಡಿ ಪರಾರಿಯಾಗಿದ್ದರು.

ಘಟನೆ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯಲ್ಲಿ 7 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ತಲೆ ಮರೆಸಿಕೊಂಡಿದ್ದ ಆರೋಪಿಗಳಿಗಾಗಿ ತನಿಖೆ ಆರಂಭಿಸಿದ್ದ ಪೊಲೀಸರು ಶನಿವಾರ ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೆ ನಾಲ್ವರನ್ನು ಬಂಧಿಸಿದ್ದಾರೆ. 

ಈ ಪ್ರಕರಣ ಸಂಬಂಧ ಇದುವರೆಗೆ ಪೊಲೀಸರು 11 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಒಟ್ಟು 330 ಗ್ರಾಂ. ಚಿನ್ನ, 2 ಕಾರು, 2 ಬೈಕ್, 8 ಮೊಬೈಲ್‍ಗಳನ್ನು ವಶಕ್ಕೆ ಪಡೆದಿದ್ದು, ಪ್ರಕರಣದ ಬಾಕಿ ಆರೋಪಿಗಳಿಗಾಗಿ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಇಲಾಖೆಯ ಪ್ರಕಟನೆ ತಿಳಿಸಿದೆ.

Similar News