ರಾಜಕೀಯದಲ್ಲಿ ಆಸಕ್ತಿಯಿಲ್ಲ, ಅರಮನೆ ಪರಂಪರೆ ಮುಂದುವರಿಸಿಕೊಂಡು ಹೋಗಲು ಬದ್ಧ: ಯದುವೀರ್ ಒಡೆಯರ್

Update: 2023-05-28 14:06 GMT

ಮಡಿಕೇರಿ ಮೇ 28 : 'ರಾಜಕೀಯದಲ್ಲಿ ಖಂಡಿತಾ ಆಸಕ್ತಿ ಇಲ್ಲ, ಮೈಸೂರು ಅರಮನೆ ಪರಂಪರೆ ಮುಂದುವರಿಸಿಕೊಂಡು ಹೋಗಲು ಬದ್ಧ' ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣರಾಜ ಒಡೆಯರ್ ತಿಳಿಸಿದ್ದಾರೆ.

ಸುಂಟಿಕೊಪ್ಪದಲ್ಲಿ ಡಿ.ಶಿವಪ್ಪ ಸ್ಮಾರಕ 25 ನೇ ವರ್ಷದ ಫುಟ್ ಬಾಲ್ ಪಂದ್ಯಾವಳಿಯ ಅಂತಿಮ ಪಂದ್ಯವನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಜಕೀಯದಿಂದ ದೂರ ಎಂದು ಈಗಾಗಲೇ ಹೇಳಿದ್ದೇನೆ, ಮುಂದೆಯೂ ರಾಜಕೀಯದಿಂದ ದೂರವೇ ಇರುತ್ತೇನೆ' ಎಂದರು.

ಸಮಾಜದಲ್ಲಿ ಸಾಮರಸ್ಯ ಕಾಪಾಡಲು ಕ್ರೀಡಾಕೂಟಗಳು ಬಹಳ ಮುಖ್ಯ, ಕೊಡಗಿನ ಕೋಲ್ಕೋತ್ತಾ ಎಂದು ಖ್ಯಾತಿ ಪಡೆದು ಫುಟ್ಬಾಲ್ ಕ್ರೀಡೆಗೆ ಹೆಸರಾಗಿರುವ ಸುಂಟಿಕೊಪ್ಪದಲ್ಲಿ 25 ವರ್ಷಗಳಿಂದ ಫುಟ್ಬಾಲ್ ಪಂದ್ಯಾವಳಿ ಆಯೋಜಿಸುತ್ತಿರುವ ಡಿ.ಶಿವಪ್ಪ ಕುಟುಂಬದ ಪ್ರಯತ್ನ ಶ್ಲಾಘನೀಯ, ಕೊಡಗಿನಲ್ಲಿ ಕ್ರೀಡಾ ಚಟುವಟಿಕೆಗೆ ಮುಂದಿನ ದಿನಗಳಲ್ಲಿ ನನ್ನಿಂದಾದ ಪ್ರೋತ್ಸಾಹ ನೀಡುವೆ ಎಂದು ಭರವಸೆ ನೀಡಿದರು.  

ಡಿ.ಶಿವಪ್ಪ ಸ್ಮಾರಕ ಫುಟ್ಬಾಲ್ ಪಂದ್ಯಾವಳಿಯ ಪ್ರಾಯೋಜಕರಾದ ಉದ್ಯಮಿ ವಿಶಾಲ್ ಶಿವಪ್ಪ ಮಾತನಾಡಿ, ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣವಾಗಿ ಸುಂಟಿಕೊಪ್ಪ ಶಾಲಾ ಕ್ರೀಡಾಂಗಣ ರೂಪಿಸುವ ಯೋಜನೆ ಇದ್ದು, ಶಾಸಕ ಡಾ.ಮಂಥರ್ ಗೌಡ ಅವರ ಸಹಕಾರದಿಂದ ಅನುಷ್ಠಾನಗೊಳಿಸುವುದಾಗಿ ಹೇಳಿದರು. 

ತಂದೆ ವಿನೋದ್ ಶಿವಪ್ಪ ಅವರ ಪ್ರಯತ್ನದಿಂದ ಕಳೆದ 25 ವರ್ಷಗಳಿಂದ ಫುಟ್ ಬಾಲ್ ಪಂದ್ಯಾವಳಿ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ನಾನು ಈ ಕ್ರೀಡಾ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ಹೇಳಿದರು. 

ವಿನೋದ್ ಶಿವಪ್ಪ, ಹರಪಳ್ಳಿ ರವೀಂದ್ರ, ಕೆ.ಪಿ.ಚಂದ್ರಕಲಾ, ಶುಭ್ರ ಅಯ್ಯಪ್ಪ, ಎ.ಲೋಕೇಶ್ ಕುಮಾರ್ ಮತ್ತಿತರರು ಹಾಜರಿದ್ದರು. 

Similar News