ಪ್ರಧಾನಿ ಮೋದಿಯವರ ಮನ್‍ ಕೀ ಬಾತ್‍ನಲ್ಲಿ ದೇಶ ಕಟ್ಟುವ ಸಂಗತಿಗಳಿರುತ್ತವೆ: ಸಿ.ಟಿ.ರವಿ

Update: 2023-05-28 14:17 GMT

ಚಿಕ್ಕಮಗಳೂರು, ಮೇ 28: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮನ್‍ಕೀ ಬಾತ್‍ನಲ್ಲಿ ದೇಶಕಟ್ಟುವ ಸಂಗತಿಗಳಿರುತ್ತವೆ. ದೇಶ ಮತ್ತು ಜಗತ್ತಿನಲ್ಲಿ ನಡೆಯುವ ಒಳ್ಳೆಯ ವಿದ್ಯಮಾನಗಳನ್ನು ಹಂಚಿಕೊಳ್ಳುತ್ತಾರೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಭಿಪ್ರಾಯಿಸಿದರು.

ರವಿವಾರ ಪ್ರಧಾನಿ ಮೋದಿ ಅವರ ಮನ್‍ಕೀ ಬಾತ್ ಕಾರ್ಯಕ್ರಮದ 101ನೇ ಕಂತನ್ನು ತಾಲೂಕಿನ ರಾಮನಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಆಲಿಸಿ ನಂತರ ಮಾತನಾಡಿದ ಅವರು, ಪ್ರಧಾನಮಂತ್ರಿಯವರ ಮನ್‍ಕೀ ಬಾತ್ ರಾಜಕೀಯದಿಂದ ಮುಕ್ತವಾಗಿರುತ್ತದೆ. ಅವರು ರಾಜಕೀಯ ನೇತಾರ ಆಗಿದ್ದರೂ ಅವರು ಎಲ್ಲೂ ಕೂಡ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ ಎಂದರು.

ದೇಶ ಮತ್ತು ಜಗತ್ತಿನಲ್ಲಿ ನಡೆಯುವ ಒಳ್ಳೆಯ ಸಂಗತಿಗಳನ್ನು ನಮ್ಮ ನಡುವೆ ಹಂಚಿಕೊಳ್ಳುವ ಕೆಲಸ ಮಾಡುತ್ತಾರೆ. ಈ ಬಾರಿಯೂ ಅನೇಕ ಮಹಾನ್ ನಾಯಕರನ್ನು ನೆನೆದು ಒಳ್ಳೆಯ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮಹಾರಾಷ್ಟ್ರದ ನಿವೃತ್ತ ಸೈನಿಕ ಕೃಷಿಯಲ್ಲಿ ಮಾಡಿರುವ ಸಾಧನೆಯನ್ನು ಹಂಚಿಕೊಂಡರು ಮತ್ತು ಜಲ ಸಂರಕ್ಷಣೆ, ಪರಿಸರ ಸಂರಕ್ಷಣೆ ವಿಚಾರಗಳನ್ನು ಹಂಚಿಕೊಂಡರು ಎಂದ ಅವರು, ಸಾಮಾನ್ಯ ಜನರ ಸಾಧನೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದರಿಂದ ನಾವು ಏನಾದರೂ ಸಾಧನೆ ಮಾಡಬೇಕೆಂಬ ವಿಶ್ವಾಸ ಮೂಡುತ್ತದೆ ಎಂದ ಅವರು, ಆ ಮೂಲಕ ರಾಷ್ಟ್ರಕಟ್ಟುವ ಕೆಲಸದ ಜೊತೆಗೆ ಎಲ್ಲರೂ ಭಾಗಿಯಾಗುತ್ತಾರೆ ಎಂದರು.

ಮನ್ ಕೀ ಬಾತ್ ಕೇಳುವುದರಿಂದ ಹೊಸದಾಗಿ ನಮ್ಮಲ್ಲಿ ಚೈತನ್ಯ ಮೂಡಿಸುತ್ತದೆ. ಈ ಎಲ್ಲಾ ಕಾರಣಗಳಿಂದ ಪ್ರಧಾನ ಮಂತ್ರಿ ಎಲ್ಲರಿಗಿಂತ ಭಿನ್ನವಾಗಿ ಕಾಣುತ್ತಾರೆ ಎಂದ ಅವರು, ರಾಜ್ಯದ ಕಾಂಗ್ರೆಸ್ ಸರಕಾರ ಈಗಷ್ಟೇ ಚಾಲನೆ ಪಡೆದುಕೊಂಡಿದೆ. ಗ್ಯಾರೆಂಟಿಗಳ ಬಗ್ಗೆ ಏನು ನಿರ್ಧಾರ ಕೈಗೊಳ್ಳುತ್ತಾರೆ ನೋಡೋಣ ಎಲ್ಲವನ್ನು ಟೀಕೆ ಮಾಡಲು ಇದು ಸಕಾಲವಲ್ಲ. ಕಾದು ನೋಡೋಣ ಎಂದರು.

ಬಹಿರಂಗಪತ್ರದ ಮೂಲಕ ನೂತನ ಕಾಂಗ್ರೆಸ್ ಶಾಸಕರನ್ನು ಎಚ್ಚರಿಸುವ ಕೆಲಸ ಮಾಡಿದ್ದೇನೆ; ಈ ಹಿಂದೆ ಇದ್ದ ಅಧಿಕಾರವನ್ನು ಬಳಸಿಕೊಂಡು 5,300 ಕೋಟಿ ರೂ. ಅನುದಾನವನ್ನು ಜಿಲ್ಲೆಗೆ ತರುವ ಕೆಲಸ ಮಾಡಿದ್ದೇನೆ. ಮುಖ್ಯಮಂತ್ರಿ ಒಂದೇ ಆದೇಶದಲ್ಲಿ ಆ ಎಲ್ಲಾ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ ಎಂದ ಅವರು, ಕಂಬಾರನಿಗೆ ವರುಷವಾದರೇ ದೊಣ್ಣೆಗೆ ನಿಮಿಷ ಎನ್ನುವಂತೆ ಸರಕಾರ ಆದೇಶ ಹೊರಡಿಸಿದ್ದು, ನಾವು ಕಷ್ಟಪಟ್ಟು ಹತ್ತಾರು ಬಾರಿ ತಿರುಗಿ ಕೇಂದ್ರ ರಾಜ್ಯದಲ್ಲಿ ಓಡಾಡಿ ಕಾಮಗಾರಿಗಳನ್ನು ಮಂಜೂರು ಮಾಡಿಸಿದ್ದೆವು. ಅದನ್ನು ಕೇವಲ ಒಂದು ಆದೇಶದಲ್ಲಿ ಸ್ಥಗಿತಗೊಳಿಸಿದ್ದಾರೆ. ಚಿಕ್ಕಮಗಳೂರು ಮಲೆನಾಡು ಜಿಲ್ಲೆ, ಮುಂದಿನ ತಿಂಗಳಿಂದ ಮಳೆಗಾಲ ಆರಂಭವಾಗುತ್ತದೆ. ಮಳೆಗಾಲಕ್ಕೆ ಮುಂಚೆಯೇ ಕಾಮಗಾರಿ ಮುಗಿಸಬೇಕು. ಆ ಜವಬ್ದಾರಿ ಕಾಂಗ್ರೆಸ್ ಶಾಸಕರ ಮೇಲಿದೆ ಎಂದು ಹೇಳಿದರು.

ಜಿಲ್ಲೆಯ ಕಾಂಗ್ರೆಸ್ ಶಾಸಕರ ಮೇಲೆ ಹೊಸ ಕಾಮಗಾರಿ ಮಂಜೂರು ಮಾಡಿಸುವುದು ಹಾಗೂ ಹಳೇ ಕಾಮಗಾರಿ ರದ್ದಾಗದಂತೆ ನೋಡಿಕೊಳ್ಳಬೇಕು. ಹಳೇ ಕಾಮಗಾರಿ ಪೂರ್ಣಗೊಳಿಸಿ ಹೊಸ ಕಾಮಗಾರಿಗಳನ್ನು ಆರಂಭಿಸಬೇಕು. ಮುಂದಿನ ಐದು ವರ್ಷದಲ್ಲಿ ರೀರ್ಪೋಟ್ ಕಾರ್ಡ್ ನೀಡುವಾಗ ಇಂತಹ ಕೆಲಸ ಮಾಡಿಸಿದ್ದೇನೆಂಬ ರೀರ್ಪೋಟ್ ಕಾರ್ಡ್ ಕೊಡಬೇಕು ಎಂದ ಅವರು, ಬಹಿರಂಗ ಪತ್ರದ ಮೂಲಕ ನೂತನ ಶಾಸಕರನ್ನು ಎಚ್ಚರಿಸುವ ಮತ್ತು ನೆನಪು ಮಾಡುವ ಕೆಲಸ ಮಾಡಿದ್ದೇನೆ ಎಂದರು.

Similar News