ಮೈಸೂರು | ಟಿ.ನರಸೀಪುರ ಬಳಿ ಭೀಕರ ರಸ್ತೆ ಅಪಘಾತ: ಮೃತರ ಸಂಖ್ಯೆ 10ಕ್ಕೆ ಏರಿಕೆ

ಮಗು ಸೇರಿ ಮೂವರು ಗಂಭೀರ

Update: 2023-05-29 14:05 GMT

ಮೈಸೂರು: ಟಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಖಾಸಗಿ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ್ದ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.

ಕೊಳ್ಳೇಗಾಲ- ಟಿ.ನರಸೀಪುರ ಮುಖ್ಯ ರಸ್ತೆಯಲ್ಲಿ ಇನೋವಾ ಕಾರು ಹಾಗೂ ಖಾಸಗಿ ಬಸ್ ನಡುವೆ ಈ ಅಪಘಾತ ಸಂಭವಿಸಿದ್ದು, ಮೃತರಲ್ಲಿ 9 ಮಂದಿ ಬಳ್ಳಾರಿ ಮೂಲದವರು ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದ ಮಂಡ್ಯ ಮೂಲದ ಚಾಲಕ ಸೇರಿ ಆರು ಮಂದಿ ಪುರುಷರು, ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಗಂಭೀರವಾಗಿ ಗಾಯಗೊಂಡವರನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಜನಾರ್ಧನ್, ಶಶಿಕುಮಾರ್, ಮಗು ಪುನೀತ್ ಗಂಭೀರ ಗಾಯಗೊಂಡವರಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

27 ರಂದು ಬಳ್ಳಾರಿ ಜಿಲ್ಲೆಯ ಸಂಗನಕಲ್ ಗ್ರಾಮದಿಂದ ಒಟ್ಟು 13 ಜನರು ಮೈಸೂರು ಪ್ರವಾಸಕ್ಕೆ ಬಂದಿದ್ದರು. ಚಾಮರಾಜನಗರ ಜಿಲ್ಲೆಯ ಮಲೆ ಚಾಮುಂಡಿ ಬೆಟ್ಟ, ಮಲೆ ಮಹದೇಶ್ವರ ಬೆಟ್ಟ ಹಾಗೂ ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗಿ ವಾಪಸ್ ಮೈಸೂರಿಗೆ ಬರುವಾಗ ಈ ಅಫಘಾತ‌ ಸಂಭವಿಸಿದೆ ಎನ್ನಲಾಗಿದೆ.

Similar News