ಅಶ್ವತ್ಥ ನಾರಾಯಣರನ್ನು ಬಂಧಿಸದಿದ್ದಲ್ಲಿ ಐಜಿಪಿ ಕಚೇರಿ ಮುಂದೆ ಧರಣಿ: ಎಂ.ಲಕ್ಷ್ಮಣ್ ಎಚ್ಚರಿಕೆ

Update: 2023-05-29 13:32 GMT

ಮೈಸೂರು: ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಿದ್ದ ಮಾಜಿ ಸಚಿವ ಅಶ್ವತ್ಥ ನಾರಾಯಣ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿ ಮಂಡ್ಯಕ್ಕೆ ಪ್ರಕರಣ ವರ್ಗಾಯಿಸಲಾಗಿದೆ. ಇನ್ನೂ 24 ಗಂಟೆಯಲ್ಲಿ ಅಶ್ವತ್ಥನಾರಾಯಣರ ಬಂಧನ ಆಗದಿದ್ದಲ್ಲಿ ಐಜಿಪಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. 

ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ದ್ವೇಷ ರಾಜಕಾರಣ ಮಾಡಿದ್ದು ಕಾಂಗ್ರೆಸ್ ಅಲ್ಲ, ಬಿಜೆಪಿ ಸರ್ಕಾರ. ಸಿದ್ದರಾಮಯ್ಯ ವಿರುದ್ಧ 2019 ರಿಂದ 2023ರ ತನಕ 42 ಪ್ರಕರಣ ದಾಖಲಿಸಿದ್ದೀರಿ. ಇದರಲ್ಲಿ 13 ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ನನ್ನ ಮೇಲೂ ಹಲವಾರು ಕೇಸುಗಳನ್ನು ದಾಖಲಿಸಿದ್ದೀರಿ.  ಈಗ ಹೇಳಿ ಯಾರು ದ್ವೇಷ ರಾಕಾರಣ ಮಾಡುತ್ತಿದ್ದಾರೆಂದು'' ಎಂದು ಅಶ್ವತ್ಥನಾರಾಯಣರ ಹೇಳಿಕೆಗೆ ತಿರುಗೇಟು ನೀಡಿದರು. 

ಶಾಂತವಾಗಿದ್ದ ಮೈಸೂರಿನಲ್ಲಿ ಕೋಮು ಗಲಭೆಗಳಿಗೆ ಪ್ರಚೋದನೆ ನೀಡುವಂತಹ ಕೃತ್ಯದಲ್ಲಿ ಭಾಗಿಯಾಗಿರುವ ಅಡ್ಡಂಡ ಕಾರ್ಯಪ್ಪ ಇನ್ನು ಮುಂದೆ ಬಾಲ ಮುದುರಿಕೊಂಡಿದ್ದರೆ ಒಳ್ಳೆಯದು. ಬಾಲ ಬಿಚ್ಚಿದರೆ ಅಡ್ಡಂಡ ಮತ್ತವನ ಚೇಲಾಗಳ ವಿರುದ್ಧ ರೌಡಿ ಶೀಟ್ ತೆರೆಯುವಂತೆ ನಾವು ಪೊಲೀಸರನ್ನು ಒತ್ತಾಯಿಸುತ್ತೇವೆ. ಈ ಹಿಂದೆ ನಮ್ಮ ಕಾರ್ಯಾಚರಣೆ, ಮಾತಿನ ವೈಖರಿ ಬೇರೆ ಇತ್ತು. ಈಗ ಬದಲಾಗಿದೆ ಎಂದು ಲಕ್ಷ್ಮಣ್ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ. ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಶಿವಣ್ಣ, ಬಿ.ಎಂ. ರಾಮು, ಗಿರೀಶ್ ಮುಂತಾದವರು ಇದ್ದರು.

Similar News