ಮೇ 31ರಿಂದ ಮೀನುಗಾರಿಕೆಗೆ ಎರಡು ತಿಂಗಳು ರಜೆ: ಬೋಟ್‌ಗಳನ್ನು ಲಂಗರು ಹಾಕುತ್ತಿರುವ ಮೀನುಗಾರರು

Update: 2023-05-29 15:20 GMT

ಮಂಗಳೂರು, ಮೇ 29: ದೇಶದಲ್ಲಿ ಉದ್ಭವಿಸಿರುವ ‘ಕಡಲ ಮತ್ಸ್ಯ ಕ್ಷಾಮ’ದ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಕರ್ನಾಟಕ ಸೇರಿದಂತೆ ದೇಶದಲ್ಲಿ 61 ದಿನಗಳ ಮೀನುಗಾರಿಕೆಗೆ ನಿಷೇಧ ಹೇರಿ ಕೇಂದ್ರ ಸರಕಾರ ಏಕರೂಪಿ ಆದೇಶದಂತೆ ಮೇ 31ರ ಮಧ್ಯರಾತ್ರಿಯಿಂದ ಜುಲೈ 31ರ ತನಕ ಮೀನುಗಾರಿಕೆಗೆ ರಜೆ ಸಾರಲಾಗಿದೆ. ಅದರಂತೆ ನಗರದ ಬಂದರ್ ದಕ್ಕೆಯಲ್ಲಿ ಮೀನುಗಾರರು ಮನೆ ಕಡೆಗೆ ತೆರಳಲು ಅಂತಿಮ ಸಿದ್ಧತೆಯಲ್ಲಿದ್ದಾರೆ.

ಒರಿಸ್ಸಾ, ಜಾರ್ಖಂಡ್, ಆಂಧ್ರಪ್ರದೇಶ ಮತ್ತಿತರ ಹೊರ ರಾಜ್ಯದ ಬಹುತೇಕ ಮೀನುಗಾರರು ಊರಿಗೆ ತೆರಳಿದ್ದಾರೆ. ಅಲ್ಲದೆ ಶೇ.80ರಷ್ಟು ಮೀನುಗಾರಿಕಾ ಬೋಟ್‌ಗಳನ್ನು ದಡಕ್ಕೆ ತಂದು ಲಂಗರು ಹಾಕಲಾಗಿದೆ.

2022-23ನೆ ಸಾಲಿನಲ್ಲಿ ಮೀನುಗಾರರಿಗೆ ಫೆಬ್ರವರಿವರೆಗೆ ಉತ್ತಮ ಪ್ರಮಾಣದಲ್ಲಿ ಮೀನುಗಳು ಲಭಿಸಿದೆ. ಚಂಡಮಾರುತದಂತಹ ಪ್ರಾಕೃತಿಕ ವಿಕೋಪಗಳು ಎದುರಾಗಿರಲಿಲ್ಲ. ಡೀಸೆಲ್ ಕೂಡಾ ಲಭಿಸಿದೆ. ಬೋಟ್ ಮಾಲಕರಿಗೆ ಮಾತ್ರವಲ್ಲದೆ, ನಮಗೂ ಉತ್ತಮ ಆದಾಯವಾಗಿದೆ ಎಂದು ಮೀನುಗಾರರೊಬ್ಬರು ತಿಳಿಸಿದ್ದಾರೆ.

ದ.ಕ. ಜಿಲ್ಲೆಯಲ್ಲಿ 21 ಮೀನುಗಾರಿಕಾ ಗ್ರಾಮಗಳಿದ್ದು, ಸುಮಾರು 55 ಸಾವಿರ ಮೀನುಗಾರರು ವಾಸವಾಗಿದ್ದಾರೆ. ಈ ಪೈಕಿ 30 ಸಾವಿರ ಮೀನುಗಾರರು ವೃತ್ತಿನಿರತರಾಗಿದ್ದಾರೆ. ಜಿಲ್ಲೆಯಲ್ಲಿ 845 ಯಾಂತ್ರೀಕೃತ ದೋಣಿ (ಪರ್ಸೀನ್, ಟ್ರಾಲರ್), 1,109 ಮೋಟಾರ್ ಅಳವಡಿಸಿದ ಬೋಟ್ ಮತ್ತು 400 ಸಾಂಪ್ರದಾಯಿಕ ದೋಣಿಗಳು ಕಾರ್ಯಾಚರಿಸುತ್ತಿವೆ.

ಪ್ರತಿ ವರ್ಷದ ಜೂನ್‌ನಿಂದ ಆಗಸ್ಟ್ ಅಂತ್ಯದವರೆಗೆ ಮೀನುಗಳು ಸಂತಾನೋತ್ಪತ್ತಿ ನಡೆಸುವ ಸಮಯವಾಗಿದೆ. ಈ ಅವಧಿಯಲ್ಲಿ ಯಾಂತ್ರೀಕೃತ ದೋಣಿಯಲ್ಲಿ ಮೀನುಗಾರಿಕೆ ಮಾಡದಂತೆ ಸರಕಾರ ಕಾನೂನು ರೂಪಿಸಿದೆ. ಅದಲ್ಲದೆ ಈ ಅವಧಿಯು ಮಳೆಗಾಲವೂ ಆಗಿರುವುದರಿಂದ ಅಪಾಯ ಸಂಭವಿಸುವ ಸಾಧ್ಯತೆಯೂ ಹೆಚ್ಚಿರುವುದರಿಂದ ಮೀನುಗಾರರಿಗೆ ರಕ್ಷಣೆ ಸಿಗುತ್ತಿದೆ.

ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಫೆಬ್ರವರಿ ತನಕ ಮೀನಿನ ಫಸಲು ಉತ್ತಮವಾಗಿತ್ತು. ವಿದೇಶಗಳಿಗೆ ರಫ್ತಾಗುವ ಮೀನುಗಳಿಗೆ ದರ ಇಳಿಕೆಯಾದ ಕಾರಣ ಒಂದಷ್ಟು ನಷ್ಟವಾಗಿದೆ. ವಿದೇಶಗಳಿಗೆ ರಫ್ತಾಗುವ ಪರ್ಸೀನ್ ಬೋಟ್‌ಗಳ ಮೀನುಗಳಿಗೆ ಉತ್ತಮ ದರ ದೊರೆತಿವೆ. ಟ್ರಾಲ್‌ಬೋಟ್‌ನ ಮೀನುಗಾರರು ಕನಿಷ್ಟ ವಾರದ ತನಕ ಸಮುದ್ರದಲ್ಲಿದ್ದು, ಲಭಿಸಿದ ಮೀನನ್ನು ಮಂಜುಗಡ್ಡೆಯಲ್ಲಿ ಹಾಕಿಡುತ್ತಾರೆ.

ಒಂದು ವಾರ ಕಳೆದ ಬಳಿಕ ಮೀನಿನ ತಾಜಾತನ ಕಳೆದು ಹೋಗುತ್ತದೆ. ಹಾಗಾಗಿ ಅದಕ್ಕೆ ಉತ್ತಮ ದರ ಸಿಗುವುದಿಲ್ಲ ಎಂದು ಮೀನು ಉದ್ಯಮಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಮೀನುಗಾರಿಕೆಗೆ ರಜೆ ಸಿಕ್ಕಾಗ ನಾಡದೋಣಿಗಳು ಮೀನುಗಳ ಬೇಟೆಗೆ ಮುಂದಾಗುತ್ತವೆ. ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಮೀನುಗಾರರಿಗೆ ಸಿಗಡಿ ಬಲೆಗೆ ಬಿದ್ದರಷ್ಟೇ ಅಧಿಕ ಲಾಭವಾಗುತ್ತದೆ. 10 ಅಶ್ವಶಕ್ತಿಯ ಇಂಜಿನ್ ಅಳವಡಿಸಿದ ದೋಣಿಗಳಲ್ಲಿ ಸಮುದ್ರದ ಬದಿ ಹಾಗೂ ನದಿಗಳಲ್ಲಿ ಮೀನುಗಾರಿಕೆ ನಡೆಸುತ್ತಾರೆ. ಅದಲ್ಲದೆ ಮಳೆಗಾಲದಲ್ಲಿ ನದಿ ಮೀನಿಗೆ ತುಂಬಾ ಬೇಡಿಕೆ ಒದೆ. ಅದರಲ್ಲೂ  ಕಾನೆ, ಪಯ್ಯೆ, ಬಲ್ಚಟ್ ಮೀನುಗಳು ಧಾರಾಳವಾಗಿ ನದಿಯಲ್ಲಿ ದೊರೆಯುತ್ತಿದೆ. ಹಾಗಾಗಿ ಗ್ರಾಹಕರು ನದಿ ಮೀನುಗಳಿಗಾಗಿ ದುಂಬಾಲು ಬೀಳುತ್ತಾರೆ. 

ಮಂಗಳೂರು ಬಂದರು ದಕ್ಕೆಯಲ್ಲಿ ಬೋಟ್ ನಿಲ್ಲಿಸಲು ಸ್ಥಳಾವಕಾಶದ ಕೊರತೆ ಇದೆ. ದೋಣಿಗಳು ಒಂದಕ್ಕೊಂದು ತಾಗಿಕೊಂಡು ಲಂಗರು ಹಾಕಿವೆ. ಪರಸ್ಪರ ತಾಗಿಕೊಳ್ಳುವುದರಿಂದ ಬೋಟ್‌ಗಳಿಗೆ ಹಾನಿಯಾಗಿ ಮಾಲಕರು ನಷ್ಟ ಅನುಭವಿಸುವುದುಂಟು. ಕೆಲವು ದೋಣಿಗಳನ್ನು ಕಸ್ಬಾ ಬೆಂಗ್ರೆ, ಕುದ್ರೋಳಿ ಕಡೆ ನಿಲ್ಲಿಸುವ ಅನಿವಾರ್ಯತೆ ಎದುರಾಗಿದೆ.

ಸದಾ ಗಿಜಿಗುಡುವ, ಕೋಟ್ಯಂತರ ರೂ. ವ್ಯವಹಾರ ನಡೆಯುವ ಬಂದರು ದಕ್ಕೆಯಲ್ಲಿ ‘ಮೀನುಗಾರಿಕಾ ರಜೆ’ಯ ವೇಳೆ ನಿಶ್ಯಬ್ಧವಾಗುತ್ತದೆ.  ಅಂಗಡಿ, ಹೋಟೆಲ್, ಐಸ್‌ಪ್ಲಾಂಟ್‌ಗಳು ಮುಚ್ಚಲ್ಪಡುತ್ತವೆ. ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿವೆ.

"ಕರಾವಳಿಯಲ್ಲಿ ಮೇ 31ರ ಮಧ್ಯರಾತ್ರಿಯಿಂದ ಜು.31ರತನಕ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧವಿದೆ. ಆದೇಶ ಉಲ್ಲಂಘಿಸುವ ಬೋಟ್‌ಗಳ ಮಾಲಕರು ಡೀಸೆಲ್ ಮೇಲಿನ ಸಹಾಯಧನ ಪಡೆಯಲು ಅನರ್ಹರಾಗು ತ್ತಾರೆ".

-ಹರೀಶ್ ಕುಮಾರ್ ಜಂಟಿ ನಿರ್ದೇಶಕರು, ಮೀನುಗಾರಿಕಾ ಇಲಾಖೆ, ದ.ಕ.ಜಿಲ್ಲೆ

Similar News