ಕಲುಷಿತ ನೀರು ಸೇವಿಸಿ ಬಾಲಕ ಸಾವು ಪ್ರಕರಣ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

Update: 2023-05-29 15:54 GMT

ಬೆಂಗಳೂರು, ಮೇ 29: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಮಗು ಮೃತಪಟ್ಟಿರುವ ಘಟನೆ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

ಸೋಮವಾರ ಸಚಿವರಾಗಿ ಅಧಿಕಾರವಹಿಸಿಕೊಂಡ ಹಿನ್ನೆಲೆ ಇಲಾಖೆಯ ಉನ್ನತಾಧಿಕಾರಿಗಳ ಪ್ರಥಮ ಸಭೆ ನಡಸಿದ ಅವರು, ಕುಡಿಯುವ ನೀರೇ ವಿಷವಾದರೆ ಜನ ಬದುಕುವುದಾದರೂ ಹೇಗೆ? ರಾಜ್ಯದಲ್ಲಿ ಜಲ ಮೂಲಗಳಿಗೆ, ಕೆರೆ, ನದಿ, ರಾಜಕಾಲುವೆಗಳಿಗೆ ವಿಷಯುಕ್ತ ತ್ಯಾಜ್ಯ ಹರಿಸುತ್ತಿರುವ ಕಾರ್ಖಾನೆಗಳ ವಿರುದ್ಧ ಕಾನೂನು ರೀತ್ಯ ಕ್ರಮ ಏಕೆ ಜರುಗಿಸಿಲ್ಲ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.

ಇಂದು ಕುಡಿಯುವ ನೀರು ಕಲುಷಿತವಾಗಿದೆ, ಪ್ರಾಣವಾಯು ನಾವು ಉಸಿರಾಡುವ ಗಾಳಿಯೂ ವಿಷಯುಕ್ತವಾಗುತ್ತಿದೆ. ಹೊಸದಿಲ್ಲಿಯಲ್ಲಿ ಬಂದಿರುವ ಸ್ಥಿತಿ ರಾಜ್ಯಕ್ಕೂ ಬರಬಾರದು, ಈ ನಿಟ್ಟಿನಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆಯ ಜವಾಬ್ದಾರಿ ಗುರುತರವಾಗಿದೆ. ಇಲಾಖೆ ಮತ್ತು ಅಧಿಕಾರಿಗಳು ಈಗ ನಿರ್ಲಕ್ಷ್ಯ ವಹಿಸಿದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ ಎಂದರು.

ಪಟ್ಟಿ ನೀಡಲು ಸೂಚನೆ: ಕಾರ್ಖಾನೆಗಳು ಕಾರ್ಯ ನಿರ್ವಹಿಸಲು ಪರಿಸರ ಇಲಾಖೆಯ ಅನುಮತಿ ಕಡ್ಡಾಯವಾಗಿದೆ. ಇಲಾಖೆಯ ನಿಯಮ ಮತ್ತು ನಿಬಂದನೆಗಳನ್ನು ಗಾಳಿಗೆ ತೂರಿ ಮತ್ತು ಅನುಮತಿಯನ್ನೂ ಪಡೆಯದೆ ಕಾರ್ಖಾನೆ ನಡೆಸುತ್ತಾ, ರಾಸಾಯನಿಕ ತ್ಯಾಜ್ಯವನ್ನು ಜಲ ಮೂಲಗಳಿಗೆ ಹರಿಸುತ್ತಿರುವ, ಬೋರ್‍ವೆಲ್ ತೋಡಿ ಅದಕ್ಕೆ ಹರಿಸುವ ಮೂಲಕ ಅಂತರ್ಜಲವನ್ನೆ ಕಲುಷಿತಗೊಳಿಸುತ್ತಿರುವ ಕಾರ್ಖಾನೆಗಳ ಪಟ್ಟಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಖಾಲಿ ಹುದ್ದೆ ಭರ್ತಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿರುವ ಇಲಾಖೆಯ ಹುದ್ದೆಗಳನ್ನು ಆದ್ಯತೆಯ ಮೇಲೆ ಭರ್ತಿ ಮಾಡುವಂತೆ ಅಧಿಕಾರಿಗಳಿಗೆ ಸಚಿವ ಈಶ್ವರ ಖಂಡ್ರೆ ಸೂಚಿಸಿದರು. ಆರ್ಥಿಕ ಇಲಾಖೆಯ ಅನುಮೋದನೆ ಇಲ್ಲದೆಯೇ 371 ಜೆ ಅಡಿಯಲ್ಲಿ ನೇಮಕಾತಿ ಮಾಡಲು ಅವಕಾಶವಿದೆ. ಆದರೆ, ಆರ್ಥಿಕ ಇಲಾಖೆ ಒಪ್ಪಿಗೆ ಇದ್ದರೂ ನೇಮಕಾತಿ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಕೂಡಲೇ ಖಾಲಿ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಸಭೆಯಲ್ಲಿ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಪ್ರಧಾನ ಕಾರ್ಯದರ್ಶಿ ಡಾ.ಸಂಜಯ್ ಬಿಜ್ದೂರ್, ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಜಯ್ ಮೋಹನ್ ರಾಜ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜೀವ್ ರಂಜನ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಭಿವೃದ್ಧಿ ಬ್ರಿಜೇಶ್ ಕುಮಾರ್ ದೀಕ್ಷಿತ್ ಸೇರಿದಂತೆ ಪ್ರಮುಖರಿದ್ದರು.

Similar News