ಪೊಲೀಸರ ವಶದಲ್ಲಿದ್ದ ಆರ್‌ಟಿಐ ಕಾರ್ಯಕರ್ತ ಅನುಮಾನಾಸ್ಪದ ಸಾವು ಪ್ರಕರಣ: ಪಿಎಸ್‌ಐ, ಪೇದೆ ಅಮಾನತು

Update: 2023-05-29 16:49 GMT

ದಾವಣಗೆರೆ: ಪೊಲೀಸರ ವಶದಲ್ಲಿದ್ದ ಆರ್‌ಟಿಐ ಕಾರ್ಯಕರ್ತ ಹರೀಶ್ ಹಳ್ಳಿ(40) ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಗಾಂಧಿನಗರ ಠಾಣೆ ಪಿಎಸ್‌ಐ ಹಾಗೂ ಓರ್ವ ಪೇದೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಅರುಣ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಹರೀಶ್ ಹಳ್ಳಿಯನ್ನು ವಶಕ್ಕೆ ಪಡೆದು ದಾವಣಗೆರೆಗೆ ಕರೆ ತರುತ್ತಿದ್ದ ಪಿಎಸ್‌ಐ ಕೃಷ್ಣಪ್ಪ ಹಾಗೂ ಪೊಲೀಸ್ ಪೇದೆ ದೇವರಾಜರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ ಮೂರು ನಿವೇಶನಗಳನ್ನು ತಮ್ಮ ಕುಟುಂಬದ ಹೆಸರಿಗೆ ಮಾಡಿರುವ ಆರೋಪದ ಮೇಲೆ ಹರೀಶ್ ಹಳ್ಳಿ ವಿರುದ್ಧ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಪೊಲೀಸರು ಹರೀಶ್‌ನನ್ನು ವಶಕ್ಕೆ ಪಡೆದು ಕರೆದುಕೊಂಡು ಬರುವ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾರಿನಿಂದ ಜಿಗಿದು, ಫ್ಲೈ ಓವರ್‌ನ ಸೇವಾ ರಸ್ತೆಗೆ ಬಿದ್ದು ಸಾವನ್ನಪ್ಪಿದ್ದಾನೆಂದು ಪೊಲೀಸರು ತಿಳಿಸಿದ್ದರು. ಆದರೆ, ಅವರ ಪತ್ನಿ ತನ್ನ ಗಂಡನ ಸಾವಿಗೆ ಪೊಲೀಸರೆ ಕಾರಣ ಎಂದು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಿಎಸ್‌ಐ ಕೃಷ್ಣಪ್ಪ ಹಾಗೂ ಪೊಲೀಸ್ ಪೇದೆ ದೇವರಾಜರನ್ನು ಅಮಾನತು ಮಾಡಲಾಗಿದೆ.

Similar News