ಸಿದ್ದರಾಮಯ್ಯ ವಿರುದ್ಧ ಪ್ರಚೋದನಕಾರಿ ಹೇಳಿಕೆ: ಅಶ್ವತ್ಥನಾರಾಯಣ್ ವಿರುದ್ಧದ ತನಿಖೆಗೆ ಹೈಕೋರ್ಟ್ ನಿಂದ ತಡೆ

Update: 2023-05-30 13:04 GMT

ಬೆಂಗಳೂರು: ಬಿಜೆಪಿ ಕಾರ್ಯಕರ್ತರ ಸಭೆಯೊಂದರಲ್ಲಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಟಿಪ್ಪುವನ್ನು ಹೊಡೆದು ಹಾಕಿದ ರೀತಿಯಲ್ಲಿ ಸಿದ್ದರಾಮಯ್ಯರನ್ನು ಹೊಡೆದು ಹಾಕಿ ಎಂದು ಕರೆ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ನಾಲ್ಕು ವಾರ ತನಿಖೆಗೆ ತಡೆ ನೀಡಿ ಹೈಕೋರ್ಟ್ ಆದೇಶಿಸಿದೆ. 
ಬಿಜೆಪಿ ಶಾಸಕ ಅಶ್ವತ್ಥನಾರಾಯಣ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.

ಮಾಜಿ ಸಚಿವ, ಹಾಲಿ ಶಾಸಕ ಅಶ್ವತ್ಥನಾರಾಯಣ್ ವಿರುದ್ಧದ ತನಿಖೆಗೆ ನಾಲ್ಕು ವಾರಗಳ ತಡೆ ನೀಡಲಾಗಿದ್ದು, ನಾಲ್ಕು ವಾರಗಳ ಒಳಗೆ ರಾಜ್ಯ ಸರಕಾರ ಆಕ್ಷೇಪಣೆ ಸಲ್ಲಿಸಬೇಕು ಎಂದು ಸೂಚಿಸಿದ ನ್ಯಾಯಾಲಯವು ವಿಚಾರಣೆ ಮುಂದೂಡಿತು. 

ಅರ್ಜಿದಾರ ಅಶ್ವತ್ಥನಾರಾಯಣ್ ವಿರುದ್ಧ ದಾಖಲಾಗಿರುವ ಪ್ರಕರಣ ಸಂವಿಧಾನದ ಪರಿಚ್ಛೇದ 14 ಮತ್ತು 21ಕ್ಕೆ ವಿರುದ್ಧವಾಗಿದ್ದು, ಕಾನೂನು ಬಾಹಿರವಾಗಿ ಪ್ರಕರಣ ದಾಖಲಿಸಲಾಗಿದೆ. ಕ್ರಿಮಿನಲ್ ಬೆದರಿಕೆ, ದಂಗೆ ಉಂಟು ಮಾಡುವುದು, ಉದ್ದೇಶಪೂರ್ವಕವಾಗಿ ಪ್ರಚೋದನೆ ನೀಡಿರುವ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇದಕ್ಕೆ ಸೂಕ್ತ ಪುರಾವೆಗಳು ಇಲ್ಲವಾಗಿದೆ. 

ಅಲ್ಲದೆ, ದೂರುದಾರರು ಘಟನಾ ಸ್ಥಳದಲ್ಲಿ ಇರಲಿಲ್ಲ. ಅರ್ಜಿದಾರರ ಭಾಷಣದಿಂದ ಈವರೆಗೂ ಯಾವುದೇ ಗಲಭೆ ನಡೆದಿಲ್ಲ. ಅಲ್ಲದೇ ಅರ್ಜಿದಾರರ ಹೇಳಿಕೆಯಿಂದ ಯಾವ ವ್ಯಕ್ತಿಯ ಮೇಲೆ ನೇರವಾಗಿ ಪರಿಣಾಮ ಬೀರಲಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಪ್ರಕರಣವೇನು?: 2023ರ ಫೆಬ್ರವರಿ 15 ರಂದು ಸಚಿವರಾಗಿದ್ದ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ಮಂಡ್ಯದ ಸಾತನೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉರಿಗೌಡ-ನಂಜೆಗೌಡ ಟಿಪ್ಪುವನ್ನು ಕೊಂದಿದ್ದರು. ಅದೇ ರೀತಿಯಲ್ಲಿ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದಿದ್ದರು. ಈ ಸಂಬಂಧ ಕೆಪಿಸಿಸಿ ವಕ್ತಾರ ಲಕ್ಷ್ಮಣ ಅವರು ಮೇ 24ರಂದು ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Similar News