ರಾಜ್ಯ ಸರಕಾರಿ ನೌಕರರ ತುಟ್ಟಿಭತ್ತೆ ಶೇ.35ಕ್ಕೆ ಹೆಚ್ಚಳ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2023-05-30 13:46 GMT

ಬೆಂಗಳೂರು: ಪ್ರಸಕ್ತ ಸಾಲಿನ ಜ.1ರಿಂದ ಜಾರಿಗೆ ಬರುವಂತೆ ರಾಜ್ಯ ಸರಕಾರಿ ನೌಕರರ ತುಟ್ಟಿಭತ್ತೆಯನ್ನು ಶೇ.31ರಿಂದ 35ಕ್ಕೆ ಹೆಚ್ಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರಕಾರಿ ನೌಕರರಿಗೆ ಪ್ರಸಕ್ತ ಸಾಲಿನ ಜ.1 ರಿಂದ ಜಾರಿಗೆ ಬರುವಂತೆ ತುಟ್ಟಿ ಭತ್ತೆಯ ದರಗಳನ್ನು ಮೂಲ ವೇತನದ ಶೇ.31 ರಿಂದ 35ಕ್ಕೆ ಪರಿಷ್ಕರಿಸಿ ಮಂಜೂರು ಮಾಡಲಾಗಿದೆ.

ರಾಜ್ಯ ಸರಕಾರದ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರಿಗೆ ಮತ್ತು ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರಿಗೂ ಜ.1ರಿಂದ ಜಾರಿಗೆ ಬರುವಂತೆ ಹಾಲಿ ಲಭ್ಯವಿರುವ ತುಟ್ಟಿಭತ್ತೆಯ ದರಗಳನ್ನು ಮೂಲ ನಿವೃತ್ತಿ ವೇತನ, ಕುಟುಂಬ ನಿವೃತ್ತಿ ವೇತನದ ಪ್ರಸಕ್ತ ಶೇ.31 ರಿಂದ 35ಕ್ಕೆ ಹೆಚ್ಚಿಸಿ ಮಂಜೂರು ಮಾಡಲಾಗಿದೆ.

ಯುಜಿಸಿ, ಎಐಸಿಟಿಇ, ಐಸಿಎಆರ್ ವೇತನ ಶ್ರೇಣಿಗಳ ನಿವೃತ್ತಿ ವೇತನದಾರರಿಗೂ ಈ ಆದೇಶಗಳು ಅನ್ವಯಿಸುತ್ತವೆ. ಸರಕಾರದ ಮತ್ತು ಜಿಲ್ಲಾ ಪಂಚಾಯತ್‍ಗಳ ಪೂರ್ಣಾವಧಿ ನೌಕರರಿಗೆ, ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್‍ಚಾರ್ಜ್ ನೌಕರರಿಗೆ ಹಾಗೂ ಸರಕಾರದಿಂದ ಸಹಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ನೌಕರರಿಗೆ ಈ ಆದೇಶ ಅನ್ವಯಿಸುತ್ತದೆ.

ಯುಜಿಸಿ, ಎಐಸಿಟಿಇ, ಐಸಿಎಆರ್, ಎನ್‍ಜೆಪಿಸಿ ವೇತನ ಶ್ರೇಣಿಗಳಲ್ಲಿ ಹಾಲಿ ವೇತನ ಪಡೆಯುತ್ತಿರುವ ನೌಕರರಿಗೆ ಮತ್ತು ಎನ್‍ಜೆಪಿಸಿ ಪಿಂಚಣಿದಾರರಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
 

Similar News