ವಿದ್ಯಾರ್ಥಿಗಳಿಗೆ ಸೂಕ್ತ ಕಾಲಕ್ಕೆ ವಿದ್ಯಾರ್ಥಿವೇತನ: ಸಚಿವ ಡಾ.ಎಚ್.ಸಿ. ಮಹದೇವಪ್ಪ

Update: 2023-05-30 14:01 GMT

ಬೆಂಗಳೂರು: ಕಳೆದ ಸರಕಾರದ ಅವಧಿಯಲ್ಲಿ ಬಡ ಮಕ್ಕಳು ಶುಲ್ಕ ಪಾವತಿಸದೆ ಇದ್ದರೆ ಶಿಕ್ಷಣ ಪಡೆಯುವುದಕ್ಕೆ ಸಾಕಷ್ಟು ಅಡ್ಡಿ ಮಾಡಲಾಗುತ್ತಿತ್ತು. ಆದರೆ, ಶಿಕ್ಷಣ ಎನ್ನುವುದು ಪ್ರಾಥಮಿಕವಾದ ಹಕ್ಕಾಗಿದ್ದು ಶುಲ್ಕದ ನೆಪವೊಡ್ಡಿ ಯಾವುದೆ ವಿದ್ಯಾರ್ಥಿಗೂ ಯಾರೂ ಸಹ ಶಿಕ್ಷಣದ ಸೌಲಭ್ಯವನ್ನು ವಂಚಿಸುವಂತಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಬಡ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡದೆ ತಮ್ಮದೆ ದುರಾಡಳಿತದಲ್ಲಿ ಮುಳುಗಿದ್ದ ಈ ಹಿಂದಿನ ಸರಕಾರದ ಅರಾಜಕತೆಯನ್ನು ಖಂಡಿಸುತ್ತಾ ಎಲ್ಲ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ಕಾಲಕ್ಕೆ ವಿದ್ಯಾರ್ಥಿ ವೇತನ ದೊರೆಯುವಂತೆ ಎಲ್ಲ ಅಧಿಕಾರಿಗಳಿಗೂ ಕಟ್ಟು ನಿಟ್ಟಿನ ಸೂಚನೆ ನೀಡಲಾಗುವುದು ಎಂದು ಹೇಳಿದ್ದಾರೆ.

ವಿದ್ಯಾರ್ಥಿ ವೇತನದ ವಿಷಯದಲ್ಲಿ ತೊಂದರೆ ಉಂಟು ಮಾಡಿದರೆ ಅದನ್ನು ವಿದ್ಯಾರ್ಥಿಗಳು ನಮ್ಮ ಗಮನಕ್ಕೆ ತರಬೇಕು ಎಂದು ಈ ಮೂಲಕ ವಿನಂತಿಸುತ್ತೇನೆ ಹಾಗೂ ಕಠಿಣ ಶ್ರಮದ ಮೂಲಕ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿ ಎಂದು ಮನದುಂಬಿ ಹಾರೈಸುತ್ತೇನೆ ಎಂದು ಮಹದೇವಪ್ಪ ತಿಳಿಸಿದ್ದಾರೆ.

Similar News