ಆರ್‌ಟಿಐ ಕಾರ್ಯಕರ್ತನ ಅನುಮಾನಾಸ್ಪದ ಮೃತ್ಯು ಪ್ರಕರಣ: ಸಿಬಿಐ ತನಿಖೆಗೆ ಹರೀಶ್ ಹಳ್ಳಿ ಸ್ನೇಹಿತರ ಬಳಗದ ಆಗ್ರಹ

Update: 2023-05-30 15:58 GMT

ದಾವಣಗೆರೆ: ಪೊಲೀಸ್ ವಶದಲ್ಲಿದ್ದ ಆರ್‌ಟಿಐ ಕಾರ್ಯಕರ್ತ ಹರೀಶ್ ಹಳ್ಳಿಯವರ ಸಾವು ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ ಎಂದು ಅವರ ಕುಟುಂಬದವರು ಈಗಾಗಲೇ ದೂರು ನೀಡಿದ್ದು, ಸೂಕ್ತ ತನಿಖೆಯ ನಿಟ್ಟಿನಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಹರೀಶ್ ಹಳ್ಳಿ ಸ್ನೇಹಿತರ ಬಳಗದ ಪರವಾಗಿ ಗುರುಪಾದಯ್ಯ ಮಠದ್ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ತಪ್ಪಿತಸ್ಥ ಪೊಲೀಸರ ಮೇಲೆ ಕೇಸ್ ದಾಖಲಾಗಿ, ಅವರನ್ನು ಅಮಾನತು ಮಾಡಿ, ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂಬ ಮಾಹಿತಿ ದೊರೆತಿದೆ. ಪೊಲೀಸರ ಸುಪರ್ಧಿಯಲ್ಲಿರುವಾಗಲೇ ಸಾವನ್ನಪ್ಪಿದ ಹರೀಶ್ ಹಳ್ಳಿ ಸಾವಿನ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ಇದೊಂದು ವ್ಯವಸ್ಥಿತ ಹತ್ಯೆ. ಇದರ ಹಿಂದೆ ಕಾಣದ ಕೈಗಳಿವೆ ಎಂಬುದು ನಮ್ಮ ಅನುಮಾನ. ಸರಕಾರ ಈ ಕೇಸನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದರು.

ಕೇವಲ ಸಿವಿಲ್ ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಎನ್ನುವುದು ಶುದ್ಧ ಸುಳ್ಳು. ಇಲ್ಲಿ ಹರೀಶ್‌ನನ್ನು ಮಧ್ಯರಾತ್ರಿ ಕರೆತಂದ ಪೊಲೀಸರ ಕಾರ್ಯವೈಖರಿ ತುಂಬಾ ಅನುಮಾನಕ್ಕೆ ಎಡೆಮಾಡಿಕೊಡುತ್ತದೆ. ತನ್ನ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದಿದ್ದರೂ ಆತ ಎಲ್ಲಿಯೂ ಓಡಿ ಹೋಗಿರಲಿಲ್ಲ. ಫೋನ್ ಮಾಡಿದ್ದರೆ ಠಾಣೆಗೆ ಬರುತ್ತಿದ್ದ ಅಥವಾ ಹಗಲು ಹೊತ್ತಲ್ಲಿ ಬಂಧಿಸಬಹುದಿತ್ತು. ಪೊಲೀಸರು ತಮ್ಮ ಜೀಪಿನ ಬದಲು ಆತನ ಕಾರಿನಲ್ಲಿಯೇ ಆತನನ್ನು ಕರೆದುಕೊಂಡು ಬಂದಿದ್ದಾರೂ ಏಕೆ? ಇನ್ನು, ದೇಹದ ಮೇಲೆ ಆಗಿರುವ ಗಾಯಗಳನ್ನು ನೋಡಿದರೆ ಮತ್ತು ಮೃತಪಟ್ಟ ಸ್ಥಳ ನೋಡಿದರೆ ಇದೊಂದು ವ್ಯವಸ್ಥಿತ ಕೊಲೆ ಎಂಬ ಅನುಮಾನ ಬರುತ್ತದೆ ಎಂದರು.

ಹರೀಶ್ ಹಳ್ಳಿ ಪೊಲೀಸ್ ಇಲಾಖೆಯಲ್ಲಿನ ಕೆಲವು ಹಗರಣಗಳನ್ನು ವಿಶೇಷವಾಗಿ ರಾಜ್ಯಾದ್ಯಂತ ಸುದ್ದಿಯಾಗಿದ್ದ ಅನಾಥ ಮೃತದೇಹ ಮಾರಾಟ ಮಾಫಿಯಾದ ಬಗ್ಗೆ ಕೆಲವು ಅಧಿಕಾರಸ್ಥರು, ಶೈಕ್ಷಣಿಕ ಸಂಸ್ಥೆಗಳು ಮತ್ತು ಕೈಗಾರಿಕೆಗಳ ಅಕ್ರಮ ಭೂ ಮಾಫಿ, ಅಕ್ರಮ ಗಣಿಗಾರಿಕೆ, ವಿವಿಧ ಇಲಾಖೆಗಳ ಭ್ರಷ್ಟಾಚಾರದ ವಿರುದ್ಧ ಹತ್ತು ಹಲವು ಹೋರಾಟಗಳನ್ನು ಮಾಡಿದ್ದಾರೆ ಮತ್ತು ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನೂ ಹೂಡಿದ್ದಾರೆ. ಉನ್ನತ ಅಧಿಕಾರಿಗಳು ಮತ್ತು ಕೆಲವು ಪಟ್ಟಭದ್ರ ಹಿತಾಸಕ್ತಿಗಳ ವಿರೋಧವನ್ನೂ ಎದುರಿಸುತ್ತಿದ್ದರು. ಹರೀಶ್ ಸಾವಿನ ಹಿಂದೆ ಒಂದು ದೊಡ್ಡ ಷಡ್ಯಂತ್ರ ಅಡಗಿದೆ. ಹಾಗಾಗಿ ಈ ಕೂಡಲೇ ಸರಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಮಾತ್ರ ಸತ್ಯ ಹೊರಬರುತ್ತದೆ ಎಂಬುದು ನಮ್ಮ ಆಗ್ರಹ ಎಂದು ಬಳಗದ ಸದಸ್ಯರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಳಗದ ಎಂ.ಜಿ.ಶ್ರೀಕಾಂತ್, ಗಿರೀಶ್ ಎಸ್.ದೇವರಮನಿ, ಕೆ.ಟಿ.ಗೋಪಾಲಗೌಡ, ನಾಗರಾಜ್ ಸುರ್ವೆ, ಮಲ್ಲಿಕಾರ್ಜುನ್ ಇಂಗಳೇಶ್ವರ್, ಚೇತನ್, ಬಲ್ಲೂರು ರವಿಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

Similar News